ರಶ್ಯದ ಕೊರೋನ ಲಸಿಕೆ ಸುರಕ್ಷಿತ : ಲ್ಯಾನ್ಸೆಟ್ ಅಧ್ಯಯನ ವರದಿ

Update: 2020-09-05 17:03 GMT

ಲಂಡನ್,ಸೆ.4: ರಶ್ಯದ ಕೊರೋನ ವೈರಸ್ ಲಸಿಕೆಯ ಪ್ರಯೋಗದಲ್ಲಿ ಪಾಲ್ಗೊಂಡಿದ್ದ ರೋಗಿಗಳ ದೇಹದಲ್ಲಿ ವೈರಾಣುಗಳನ್ನು ನಾಶಪಡಿಸುವ ಪ್ರತಿಕಾಯಗಳು ಸೃಷ್ಟಿಯಾಗಿರುವುದು ದೃಢಪಟ್ಟಿದೆ ಎಂದು ‘ದಿ ಲ್ಯಾನ್ಸೆಟ್’ ವೈದ್ಯಕೀಯ ಪತ್ರಿಕೆಯು ಇತ್ತೀಚೆಗೆ ಪ್ರಕಟಿಸಿದ ಅಧ್ಯಯನ ವರದಿಯೊಂದು ತಿಳಿಸಿದೆ.

 ಅಲ್ಲದೆ ಈ ಲಸಿಕೆಯಿಂದಾಗಿ ರೋಗಿಗಳಲ್ಲಿ ಯಾವುದೇ ಅಡ್ಡ ಪರಿಣಾಮಗಳು ಕೂಡಾ ಕಂಡುಬಂದಿಲ್ಲವೆಂದು ಅದು ಹೇಳಿದೆ. ಆದರೆ ಪ್ರಾಯೋಗಿಕ ಪರೀಕ್ಷೆಗಳನ್ನು ಅತ್ಯಂತ ಸಣ್ಣ ಪ್ರಮಾಣದಲ್ಲಿ ನಡೆಸಲಾಗಿರುವುದರಿಂದ, ಈ ಲಸಿಕೆಯು ಸುರಕ್ಷಿತ ಹಾಗೂ ಪರಿಣಾಮಕಾರಿಯೆಂದು ಹೇಳಲು ಸಾಧ್ಯವಿಲ್ಲವೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

  ಕೊರೋನ ವೈರಸ್ ಸೋಂಕಿನ ವಿರುದ್ಧ ರಶ್ಯವು ಕಳೆದ ತಿಂಗಳು ‘ಸ್ಪುಟ್ನಿಕ್- v’ ಎಂಬ ಲಸಿಕೆಯನ್ನು ಯಶಸ್ವಿಯಾಗಿ ಸಿದ್ಧಪಡಿಸಿರುವುದಾಗಿ ಘೋಷಿಸಿತ್ತು. ಆದಾಗ್ಯೂ ಪಾಶ್ಚಾತ್ಯ ರಾಷ್ಟ್ರಗಳ ವಿಜ್ಞಾನಿಗಳ ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದರು. ಅಲ್ಲದೆ ತ್ವರಿತವಾಗಿ ಈ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವುದು ಅಪಾಯಕಾರಿಯೆಂದು ಅವರು ಹೇಳಿದ್ದರು.

ಆದರೆ ರಶ್ಯವು ಈ ಟೀಕೆಗಳನ್ನು ತಳ್ಳಿಹಾಕಿತ್ತು, ಮಾಸ್ಕೋದ ಸಂಶೋಧನೆಯನ್ನು ಮೂಲೆಗುಂಪು ಮಾಡುವ ಪ್ರಯತ್ನ ಇದಾಗಿದೆಯೆಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News