ಯುಎಸ್ ಓಪನ್: ಡೊಮಿನಿಕ್ ಥೀಮ್-ಅಲೆಕ್ಸಾಂಡರ್ ಝ್ವೆರೆವ್ ಫೈನಲ್‌ಗೆ
ನ್ಯೂಯಾರ್ಕ್, ಸೆ.12: ರಶ್ಯದ ಡ್ಯಾನಿಲ್ ಮೆಡ್ವೆಡೆವ್‌ರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ಆಸ್ಟ್ರೀಯದ ಡೊಮಿನಿಕ್ ಥೀಮ್ ಯುಎಸ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಫೈನಲ್ ತಲುಪಿದರು.
ಇಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಥೀಮ್ ಮೂರನೇ ಶ್ರೇಯಾಂಕದ ಮಡ್ವೆಡೆವ್‌ರನ್ನು 2 ಗಂಟೆ ಹಾಗೂ 56 ನಿಮಿಷಗಳ ಹೋರಾಟದಲ್ಲಿ 6-2,7-6(9/7), 7-6(7/5) ಸೆಟ್‌ಗಳ ಅಂತರದಿಂದ ಮಣಿಸಿದರು.
27ರ ಹರೆಯದ ಥೀಮ್ ರವಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಜರ್ಮನಿಯ ಐದನೆ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್‌ರನ್ನು ಎದುರಿಸಲಿದ್ದಾರೆ. ಥೀಮ್ ಹಾಗೂ ಝ್ವೆರೆವ್ ಇಬ್ಬರೂ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಮೂರು ಗಂಟೆ, 23 ನಿಮಿಷಗಳ ಕಾಲ ನಡೆದ ಮತ್ತೊಂದು ಸೆಮಿ ಫೈನಲ್‌ನಲ್ಲಿ ಝ್ವೆರೆವ್ ಮೊದಲೆರಡು ಸೆಟ್‌ಗಳ ಸೋಲಿನಿಂದ ಚೇತರಿಸಿಕೊಂಡು ಪಾಬ್ಲೊ ಕರೆನೊ ಬುಸ್ಟಾರನ್ನು 2-6, 3-6, 6-3, 6-4, 6-3 ಸೆಟ್‌ಗಳ ಅಂತರದಿಂದ ಮಣಿಸಿದರು.