ನಾನು ಸ್ವತಂತ್ರನಾಗಿದ್ದೇನೆ : ಶ್ರೀಶಾಂತ್

Update: 2020-09-14 04:05 GMT

ಹೊಸದಿಲ್ಲಿ, ಸೆ.13: ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿರುವ ಆರೋಪದಲ್ಲಿ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿದ್ದ ಭಾರತದ ವೇಗಿ ಎಸ್. ಶ್ರೀಶಾಂತ್ ಅವರ ನಿಷೇಧವು ರವಿವಾರ ಕೊನೆಗೊಂಡಿದೆ.

ಇಂದು ಏಳು ವರ್ಷಗಳ ನಿಷೇಧದ ಸಜೆಯಿಂದ ಹೊರ ಬಂದಿರುವ 37ರ ಹರೆಯದ ಶ್ರೀಶಾಂತ್ ಇದೀಗ ಕನಿಷ್ಠ ತಮ್ಮ ದೇಶೀಯ ವೃತ್ತಿಜೀವನವನ್ನು ಪುನರಾರಂಭಿಸಲು ಉದ್ದೇಶಿಸಿದ್ದಾರೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ ಅವರು ಫಿಟ್‌ನೆಸ್‌ನ್ನು ಸಾಬೀತುಪಡಿಸಲು ಸಾಧ್ಯವಾದರೆ ಅವರನ್ನು ಪರಿಗಣಿಸುವುದಾಗಿ ಅವರ ತವರು ರಾಜ್ಯ ಕೇರಳದ ಕ್ರಿಕೆಟ್ ಸಂಸ್ಥೆ ಭರವಸೆ ನೀಡಿದೆ.

 ‘‘ನಾನು ಆರೋಪಗಳಿಂದ ಸಂಪೂರ್ಣವಾಗಿ ಮುಕ್ತನಾಗಿದ್ದೇನೆ ಮತ್ತು ಈಗ ನಾನು ಹೆಚ್ಚು ಪ್ರೀತಿಸುವ ಕ್ರೀಡೆಯನ್ನು ಪ್ರತಿನಿಧಿಸುತ್ತೇನೆ. ನಾನು ಇನ್ನೂ 5 ರಿಂದ 7 ವರ್ಷಗಳ ಗರಿಷ್ಠ ಸಮಯವನ್ನು ಹೊಂದಿದ್ದೇನೆ, ನಾನು ಆಡುವ ಯಾವುದೇ ತಂಡಕ್ಕೆ ನಾನು ಅತ್ಯುತ್ತಮವಾದದ್ದನ್ನು ನೀಡುತ್ತೇನೆ ’’ಎಂದು ಅವರು ಶುಕ್ರವಾರ ಟ್ವೀಟ್ ಮಾಡಿದ್ದರು.

ಆದಾಗ್ಯೂ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಭಾರತದ ದೇಶೀಯ ಋತುವಿನ ಟೂರ್ನಿಯನ್ನು ಪ್ರಸ್ತುತ ಮುಂದೂಡಲಾಗಿದ್ದು. ಕೇರಳ ಅವಕಾಶ ನೀಡಲು ನಿರ್ಧರಿಸಿದರೆ ಶ್ರೀಶಾಂತ್‌ರ ಪುನರಾಗಮನ ಖಚಿತ ಎನ್ನಲಾಗುತ್ತದೆ.

 ಭಾರತದ ದೇಶೀಯ ಋತುವಿನ ಕ್ರಿಕೆಟ್ ಪಂದ್ಯಾವಳಿ ಆಗಸ್ಟ್ ನಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ಸಾಂಕ್ರಾಮಿಕ ರೋಗವು ವೇಳಾಪಟ್ಟಿಯನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ.

 ‘‘ಬಿಸಿಸಿಐ ದೇಶೀಯ ಕ್ರಿಕೆಟ್‌ನ್ನು ಮತ್ತೆ ಪ್ರಾರಂಭಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ’’ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಇತ್ತೀಚೆಗೆ ಬಿಸಿಸಿಐ ಅಂಗಸಂಸ್ಥೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

 ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2013ರ ಆವೃತ್ತಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಶ್ರೀಶಾಂತ್ ಅವರ ಜೀವಾವಧಿ ನಿಷೇಧವನ್ನು ಕಳೆದ ವರ್ಷ ಬಿಸಿಸಿಐ ಒಂಬುಡ್ಸ್ಸ್‌ಮನ್ ಡಿ.ಕೆ.ಜೈನ್ ಅವರು ಏಳು ವರ್ಷಗಳಿಗೆ ಇಳಿಸಿದ್ದರು. ಕ್ರಿಕೆಟಿಗನು ಈಗಾಗಲೇ ಆರು ವರ್ಷಗಳ ಕಾಲ ಸಜೆ ಅನುಭವಿಸಿರುವುದನ್ನು ಎಂದು ಜೈನ್ ಗಮನಿಸಿದ್ದಾರೆ.

  ರಾಜಸಾನ ರಾಯಲ್ಸ್ ತಂಡದ ಸಹ ಆಟಗಾರರಾದ ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಅವರೊಂದಿಗೆ ಬಿಸಿಸಿಐ 2013ರ ಆಗಸ್ಟ್ ನಲ್ಲಿ ಶ್ರೀಶಾಂತ್‌ಗೆ ಬಿಸಿಸಿಐ ನಿಷೇಧ ವಿಧಿಸಿತ್ತು. ಆದರೆ ಕಳೆದ ವರ್ಷ ಮಾರ್ಚ್ 15 ರಂದು ಸುಪ್ರೀಂ ಕೋರ್ಟ್ ಬಿಸಿಸಿಐ ಶಿಸ್ತು ಸಮಿತಿಯ ಆದೇಶವನ್ನು ಬದಿಗಿಟ್ಟು ಶಿಕ್ಷೆಯ ಪ್ರಮಾಣವನ್ನು ಮರುಪರಿಶೀಲಿಸುವಂತೆ ಮಂಡಳಿಗೆ ಸೂಚಿಸಿತ್ತು. ಶ್ರೀಶಾಂತ್ ಭಾರತಕ್ಕಾಗಿ 27 ಟೆಸ್ಟ್ ಮತ್ತು 53 ಏಕದಿನ ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 87 ಮತ್ತು 75 ವಿಕೆಟ್ ಪಡೆದಿದ್ದಾರೆ. ಅವರು 10 ಟ್ವೆಂಟಿ -20 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಏಳು ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News