ಐಪಿಎಲ್: ಸ್ಟೋನಿಸ್ ಅಬ್ಬರ, ಡೆಲ್ಲಿ 157/8

Update: 2020-09-20 16:16 GMT

ದುಬೈ, ಸೆ.20: ವೇಗದ ಬೌಲರ್ ಮುಹಮ್ಮದ್ ಶಮಿ ನೇತೃತ್ವದ ಶಿಸ್ತುಬದ್ದ ಬೌಲಿಂಗ್ ದಾಳಿಯ ಹೊರತಾಗಿಯೂ ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದ ಸ್ಟೋನಿಸ್ ಅರ್ಧಶತಕ(53,21 ಎಸೆತ, 7 ಬೌಂಡರಿ, 3 ಸಿಕ್ಸರ್) ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿದೆ.

ನಾಯಕ ಕೆ.ಎಲ್.ರಾಹುಲ್ ಟಾಸ್ ಜಯಿಸಿ ಮೊದಲು ಬೌಲಿಂಗ್ ಆಯ್ದುಕೊಂಡರು.ರವಿ ಬಿಶ್ನೋಯ್ ಹಾಗೂ ಶೆಲ್ಡನ್ ಕೊಟ್ರೆಲ್ ಪಂಜಾಬ್ ಪರ ಚೊಚ್ಚಲ ಪಂದ್ಯ ಆಡುವ ಅವಕಾಶ ಪಡೆದರು. ಅನ್ರಿಚ್ ನೊರ್ಟ್ಜೆ ಡೆಲ್ಲಿ ಪರ ಅಂತಿಮ-11ರ ಬಳಗದಲ್ಲಿ ಸೇರ್ಪಡೆಯಾದರು.

 ಶಮಿ(3-15) ದಾಳಿಗೆ ಸಿಲುಕಿದ ಡೆಲ್ಲಿ 4ನೇ ಓವರ್‌ನಲ್ಲಿ 13 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. 4ನೇ ವಿಕೆಟ್‌ಗೆ 73 ರನ್ ಸೇರಿಸಿದ ನಾಯಕ ಶ್ರೇಯಸ್ ಅಯ್ಯರ್(39, 32 ಎಸೆತ, 3 ಸಿಕ್ಸರ್)ಹಾಗೂ ರಿಷಭ್ ಪಂತ್(31,29 ಎಸೆತ, 4 ಬೌಂಡರಿ)ತಂಡವನ್ನು ಆಧರಿಸಲು ಯತ್ನಿಸಿದರು. ಪಂತ್‌ರನ್ನು ಕ್ಲೀನ್‌ಬೌಲ್ಡ್ ಮಾಡಿದ ರವಿ ಈ ಜೋಡಿಯನ್ನು ಬೇರ್ಪಡಿಸಿದರು. ಪಂತ್ ಔಟಾದ ಬೆನ್ನಿಗೆ ಅಯ್ಯರ್ ಕೂಡ ವಿಕೆಟ್ ಕೈಚೆಲ್ಲಿದರು.

 ತಂಡ ಸಂಕಷ್ಟದಲ್ಲಿದಾಗ ಆಸರೆಯಾದ ಸ್ಟೋನಿಸ್ ಅವರು ಜೋರ್ಡನ್ ಎಸೆದ ಕೊನೆಯ ಓವರ್‌ನಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 25 ರನ್ ಕಲೆ ಹಾಕಿದರು. ಕೊನೆಯ ಓವರ್‌ವೊಂದರಲ್ಲೇ 30 ರನ್ ಹರಿದುಬಂತು.

ಪಂಜಾಬ್ ತಂಡ ಡೆಲ್ಲಿ ವಿರುದ್ಧ ಆಡಿರುವ ಕಳೆದ 5 ಪಂದ್ಯಗಳ ಪೈಕಿ 4 ಪಂದ್ಯಗಳನ್ನು ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News