ಹಾಲಿ ಚಾಂಪಿಯನ್ ನಡಾಲ್ ಗೆ ಸೋಲಿನ ಆಘಾತ

Update: 2020-09-20 17:47 GMT

ರೋಮ್, ಸೆ.20: ಅರ್ಜೆಂಟೀನದ ಡಿಯಾಗೊ ಶ್ವಾರ್ಟ್ಜ್‌ಮನ್ ವಿರುದ್ಧ ನೇರ ಸೆಟ್‌ಗಳ ಅಂತರದಿಂದ ಆಘಾತಕಾರಿ ಸೋಲುಂಡಿರುವ ಹಾಲಿ ಚಾಂಪಿಯನ್ ರಫೆಲ್ ನಡಾಲ್ ಇಟಾಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್‌ನಿಂದ ನಿರ್ಗಮಿಸಿದ್ದಾರೆ.

 ಇಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ನಡಾಲ್ ಅವರು ಡಿಯಾಗೊ ವಿರುದ್ಧ 2-6, 5-7 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. 9 ಬಾರಿ ರೋಮ್ ಚಾಂಪಿಯನ್ ಆಗಿರುವ, ಕಳೆದ 9 ಪಂದ್ಯಗಳಲ್ಲಿ ಡಿಯಾಗೊರನ್ನು ಮಣಿಸಿದ್ದ ನಡಾಲ್ ಕ್ವಾರ್ಟರ್ ಫೈನಲ್ ಪಂದ್ಯದುದ್ದಕ್ಕೂ ತನ್ನ ಹಿಂದಿನ ಲಯ ಕಂಡುಕೊಳ್ಳಲು ಪರದಾಟ ನಡೆಸಿದರು. ಸತತವಾಗಿ ಅನಗತ್ಯ ತಪ್ಪೆಸಗಿದರು. ಇದು ಅವರ ಗೆಲುವಿನ ಮೇಲೆ ಪರಿಣಾಮಬೀರಿತು. ಸ್ಪೇನ್ ಆಟಗಾರ ನಡಾಲ್ ಏಳು ತಿಂಗಳುಗಳ ಬಳಿಕ ಆಡುತ್ತಿರುವ ಮೊದಲ ಟೆನಿಸ್ ಟೂರ್ನಮೆಂಟ್ ಇದಾಗಿದೆ.

 ಪ್ಯಾರಿಸ್‌ಗೆ ತೆರಳಲಿರುವ ನಡಾಲ್ 13ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿ ದಾಖಲೆ ಮುಂದುವರಿಸುವತ್ತ ಚಿತ್ತ ಹರಿಸಿದ್ದಾರೆ. ನಡಾಲ್ ವಿರುದ್ಧ ಜಯಶಾಲಿಯಾಗಿರುವ ಡಿಯಾಗೊ ಸೆಮಿ ಫೈನಲ್ ಸುತ್ತಿನಲ್ಲಿ ಡೆನಿಸ್ ಶಪೊವಾಲೊವ್‌ರನ್ನು ಎದುರಿಸಲಿದ್ದಾರೆ. ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಕೆನಡಾದ ಶಪೊವಾಲೊವ್ ಅವರು ಗ್ರೆಗೊರ್ ಡಿಮಿಟ್ರೊವ್‌ರನ್ನು 6-2, 3-6, 6-2 ಸೆಟ್‌ಗಳಿಂದ ಮಣಿಸಿದರು. ಇದು ಟೂರ್ ಹಂತದಲ್ಲಿ ಶಪೊವಾಲೊವ್ ದಾಖಲಿಸಿರುವ 100ನೇ ಗೆಲುವಾಗಿದೆ. ಇದೇ ವೇಳೆ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಪಂದ್ಯದ ಮಧ್ಯಭಾಗದಲ್ಲಿ ಎಡವಿದರೂ 6-3, 4-6, 6-3 ಸೆಟ್‌ಗಳ ಅಂತರದಿಂದ ಜರ್ಮನಿಯ ಶ್ರೇಯಾಂಕರಹಿತ ಡೊಮಿನಿಕ್ ಕೋಪ್‌ಫೆರ್‌ರನ್ನು ಸೋಲಿಸಿದರು.

ಅಗ್ರ ರ್ಯಾಂಕಿನ ಸರ್ಬಿಯ ಆಟಗಾರ ಕಳೆದ ಎರಡು ಸುತ್ತಿನ ಪಂದ್ಯದಲ್ಲಿ ಆಡದೇ ನೇರವಾಗಿ ಮೂರನೇ ಸುತ್ತಿಗೆ ತೇರ್ಗಡೆಯಾದರು. ಯುಎಸ್ ಓಪನ್‌ನ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಅಂಪೈರ್‌ರತ್ತ ಆಕಸ್ಮಿಕವಾಗಿ ಚೆಂಡಿನಿಂದ ಜೋರಾಗಿ ಹೊಡೆದು ಪಂದ್ಯದಿಂದ ಅಮಾನತುಗೊಂಡ ಬಳಿಕ ಮೊದಲ ಪಂದ್ಯ ಆಡಿದರು.

ತನ್ನ ಏಕಾಗ್ರತೆಯನ್ನು ಮರಳಿ ಪಡೆದಿರುವ ಜೊಕೊವಿಕ್ 36ನೇ ಎಟಿಪಿ ಮಾಸ್ಟರ್ಸ್ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಕಾಸ್ಪೆರ್ ರುಡ್‌ರನ್ನು ಎದುರಿಸಲಿದ್ದಾರೆ. ನಾರ್ವೆಯ ರುಡ್ ನಾಲ್ಕನೇ ಶ್ರೇಯಾಂಕದ ಫ್ರೆಂಚ್ ಆಟಗಾರ ಮ್ಯಾಟಿಯೊ ಬೆರ್ರೆಟ್ಟಿನೊರನ್ನು ಅಂತಿಮ-8ರ ಹಣಾಹಣಿಯಲ್ಲಿ 4-6, 6-3, 7-6(5) ಸೆಟ್‌ಗಳ ಅಂತರದಿಂದ ಮಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News