ನಿಮ್ಮ ಹೇಳಿಕೆ ಕೀಳು ಅಭಿರುಚಿಯಿಂದ ಕೂಡಿದೆ: ಗವಾಸ್ಕರ್ ವಿರುದ್ಧ ಹರಿಹಾಯ್ದ ಅನುಷ್ಕಾ ಶರ್ಮ

Update: 2020-09-25 10:31 GMT

ಮುಂಬೈ :ಕಿಂಗ್ಸ್‌ ಇಲೆವೆನ್ ಪಂಜಾಬ್ ವಿರುದ್ಧ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ತಂಡದ ನಾಯಕ  ವಿರಾಟ್‌ ಕೊಹ್ಲಿ ಕಳಪೆ ಫೀಲ್ಡಿಂಗ್, ಬ್ಯಾಟಿಂಗ್  ಪ್ರದರ್ಶಿಸಿ ತಂಡದ ಸೋಲಿಗೆ ಕಾರಣರಾದ ನಂತರ ಸಾಕಷ್ಟು ಟ್ರೋಲ್‌ಗೊಳಗಾಗಿದ್ದಾರೆ. ಇದು ಸಾಲದೆಂಬಂತೆ ಕೊಹ್ಲಿ ಅವರು ಕೆ.ಎಲ್‌.ರಾಹುಲ್‌ ಅವರು ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಎರಡು ಕ್ಯಾಚ್‌ಗಳನ್ನು ಕೈಬಿಟ್ಟಿದ್ದಕ್ಕಾಗಿ ವೀಕ್ಷಕವಿವರಣೆ ನೀಡುತ್ತಿದ್ದ ಸುನೀಲ್ ಗವಾಸ್ಕರ್ ನೀಡಿದ ಒಂದು ಹೇಳಿಕೆಯಂತೂ  ಭಾರೀ ಗದ್ದಲವನ್ನೇ ಸೃಷ್ಟಿಸಿದೆ. ಗವಾಸ್ಕರ್‌ ಅವರ ಮಾತುಗಳು ಇದೀಗ ನೆಟ್ಟಿಗರ ಆಕ್ರೋಶಕ್ಕೂಗುರಿಯಾಗಿದ್ದು ಹಲವರು ಅವರನ್ನು ವೀಕ್ಷಕ ವಿವರಣೆಯಿಂದ ಹೊರಹಾಕಬೇಕೆಂದು ಆಗ್ರಹಿಸಿದ್ದಾರೆ.

ಈ ನಡುವೆ ವಿರಾಟ್‌ ಅವರ ನಿರ್ವಹಣೆಯಲ್ಲಿ ತಮ್ಮನ್ನೂ ಎಳೆದು ತಂದಿದ್ದಕ್ಕೆ ವಿರಾಟ್ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮ ಕಿಡಿಕಾರಿ ಟ್ವೀಟ್ ಮಾಡಿದ್ದಾರೆ.

‘‘ಮಿಸ್ಟರ್‌  ಗವಾಸ್ಕರ್ ನಿಮ್ಮ ಮಾತುಗಳು ಕೀಳು ಅಭಿರುಚಿಯಿಂದ ಕೂಡಿದೆ ಎಂಬುದು ವಾಸ್ತವ. ಆದರೆ ಪತಿಯ ಆಟದ ವಿಚಾರದಲ್ಲಿ ಪತ್ನಿಯ ಕುರಿತಂತೆ ಇಂತಹ ಹೇಳಿಕೆ ನೀಡಲು ನೀವೇಕೆ ಮನಸ್ಸು ಮಾಡಿದಿರಿ ಎಂದು ನೀವು ವಿವರಿಸಬೇಕೆಂದು ನಾನು ಬಯಸುತ್ತೇನೆ. ವೀಕ್ಷಕ ವಿವರಣೆ ವೇಳೆ ಹಲವು ವರ್ಷಗಳಿಂದ ನೀವು ಕ್ರಿಕೆಟಿಗರ ಖಾಸಗಿ ಬದುಕನ್ನು ಗೌರವಿಸಿದ್ದೀರಿ ಎಂದು ಭಾವಿಸಿದ್ದೇನೆ. ನೀವು ನನಗೂ, ನಮಗೂ ಅಷ್ಟೇ ಗೌರವ ತೋರಿಸಬೇಕೆಂದು ಅನಿಸುವುದಿಲ್ಲವೇ?,’’ ಎಂದು ಅನುಷ್ಕಾ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಬರೆದಿದ್ದಾರೆ.

‘‘ನನ್ನ ಪತಿಯ ಗುರುವಾರದ ಪಂದ್ಯದಲ್ಲಿನ ನಿರ್ವಹಣೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ನಿಮ್ಮಲ್ಲಿ ಹಲವಾರು ಇತರ ಪದಗಳು ಹಾಗೂ ವಾಕ್ಯಗಳಿರಬಹುದೆಂದು ನನಗೆ ತಿಳಿದಿದೆ ಅಥವಾ ನೀವು ನಿಮ್ಮಅಭಿಪ್ರಾಯ ವ್ಯಕ್ತಪಡಿಸುವ ವೇಳೆ ನನ್ನ ಹೆಸರನ್ನು ಬಳಸಿದರೆ ಮಾತ್ರ ನಿಮ್ಮ ಮಾತುಗಳು ಪ್ರಸ್ತುತವಾಗುತ್ತವೆಯೇ? ಇದು 2020 ಆದರೂ ಯಾವುದೂ ನನಗೆ ಬದಲಾಗಿಲ್ಲ. ನನ್ನನ್ನು ಕ್ರಿಕೆಟ್‌ಗೆ ಎಳೆದು ತರುವುದು ಯಾವಾಗ ನಿಲ್ಲಲಿದೆ?,’’ ಎಂದು ಬರೆದಿರುವ ಅನುಷ್ಕಾ ತಮ್ಮ ಪೋಸ್ಟ್ ಅಂತ್ಯಗೊಳಿಸುತ್ತಾ ‘‘ಗೌರವಾನ್ವಿತ ಮಿಸ್ಟರ್ ‌ಗವಾಸ್ಕರ್ ನೀವೊಬ್ಬ ದಂತಕಥೆ, ನೀವು ಈಗಲೂ ಈ ಆಟದಲ್ಲಿ ಆಳೆತ್ತರಕ್ಕೆ ನಿಲ್ಲುತ್ತೀರಿ. ನೀವು ಇಂತಹ ಮಾತುಗಳನ್ನು ಹೇಳಿದಾಗ ನನಗನಿಸದ್ದನ್ನು ಹೇಳಬೇಕೆನಿಸಿತು ಅಷ್ಟೇ,’’ ಎಂದು ಬರೆದಿದ್ದಾರೆ.

ಟ್ರೆಂಡಿಂಗ್‌ ಆಗಿದ್ದ  ‘ಐ ಡ್ರಿಂಕ್‌ ಕಾಫಿ’ ಟ್ವೀಟ್ :

ಈ ವಿವಾದದ ನಡುವೆ ಅನುಷ್ಕಾ ಅವರು ಕಳೆದ ವರ್ಷ ಮಾಜಿ ಕ್ರಿಕೆಟಿಗ ಫಾರೂಕ್‌ ಇಂಜಿನಿಯರ್‌ ಅವರು ತಮ್ಮನ್ನು ಗುರಿಯಾಗಿಸಿ ‘‘ಅವರು(ಆಯ್ಕೆಗಾರರು) ಅನುಷ್ಕಾ ಶರ್ಮ ಅವರಿಗೆ ಚಹಾ ತರಿಸುವುದರಲ್ಲಿಯೇ ವ್ಯಸ್ತರಾಗಿದ್ದಾರೆ. ದಿಲೀಪ್ ವೆಂಗ್  ಸರ್ಕಾರ್‌ ಅವರಂತಹವರು ಆಯ್ಕೆ ಸಮಿತಿಯಲ್ಲಿರಬೇಕಿತ್ತು,’’ ಎಂದು ಹೇಳಿದ್ದಕ್ಕೆ ಪ್ರತಿಯಾಗಿ ‘‘ನನ್ನ ಮೌನವನ್ನು ನನ್ನದೌರ್ಬಲ್ಯವೆಂದು ಪರಿಗಣಿಸಬೇಡಿ, ನಿಮ್ಮ ಗಮನಕ್ಕೆ ತರಲೆಂದು ನಾನು ಕುಡಿಯುವುದು ಕಾಫಿ.’’ ಎಂದು ಅನುಷ್ಕಾ ಉತ್ತರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News