ಬಾಂಗ್ಲಾ ರೊಹಿಂಗ್ಯಾ ಶಿಬಿರಗಳಲ್ಲಿ ಕ್ರಿಮಿನಲ್ ಗುಂಪುಗಳ ನಡುವೆ ಕಾದಾಟ

Update: 2020-10-09 17:30 GMT

ಢಾಕಾ (ಬಾಂಗ್ಲಾದೇಶ), ಅ. 9: ದಕ್ಷಿಣ ಬಾಂಗ್ಲಾದೇಶದಲ್ಲಿರುವ ರೊಹಿಂಗ್ಯಾ ನಿರಾಶ್ರಿತ ಶಿಬಿರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರಿಮಿನಲ್ ಗುಂಪುಗಳ ನಡುವೆ ನಡೆದ ಸಂಘರ್ಷಗಳಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ ಹಾಗೂ ಗಲಭೆಯ ಬಳಿಕ ಸಾವಿರಾರು ಮಂದಿ ಪಲಾಯನಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಗ್ಲಾದೇಶದ ರೊಹಿಂಗ್ಯಾ ನಿರಾಶ್ರಿತ ಶಿಬಿರಗಳು ಜಗತ್ತಿನ ಅತಿ ದೊಡ್ಡ ನಿರಾಶ್ರಿತ ಶಿಬಿರಗಳಾಗಿವೆ.

ಹಲವು ದಿನಗಳ ಕಾಲ ಕ್ರಿಮಿನಲ್ ಗುಂಪುಗಳಿಂದ ನಡೆದ ಗುಂಡು ಹಾರಾಟ, ಬೆಂಕಿ ಹಚ್ಚುವಿಕೆ ಮತ್ತು ಅಪಹರಣಗಳ ಬಳಿಕ 12 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೃಹತ್ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಶಿಬಿರಗಳಲ್ಲಿ ಪ್ರಾಬಲ್ಯ ಸಾಧಿಸುವುದಕ್ಕಾಗಿ ಹಲವು ಕ್ರಿಮಿನಲ್ ಗುಂಪುಗಳು ಸ್ಪರ್ಧೆಯಲ್ಲಿ ತೊಡಗಿವೆ.

2017ರಲ್ಲಿ ಮ್ಯಾನ್ಮಾರ್ ಸೇನೆಯು ದೇಶದಲ್ಲಿರುವ ರೊಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತರ ವಿರುದ್ಧ ಬೃಹತ್ ಪ್ರಮಾಣದಲ್ಲಿ ದಮನ ಕಾರ್ಯಾಚರಣೆ ನಡೆಸಿದ ಬಳಿಕ, ಮುಖ್ಯವಾಗಿ ರಖೈನ್ ರಾಜ್ಯದಲ್ಲಿ ವಾಸಿಸುತ್ತಿದ್ದ ಸುಮಾರು 7.5 ಲಕ್ಷ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ಅವರು ಈಗ ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

ಶಿಬಿರಗಳ ಪರಿಸ್ಥಿತಿ ಗಂಭೀರ: ಆ್ಯಮ್ನೆಸ್ಟಿ

ಬಾಂಗ್ಲಾದೇಶದಲ್ಲಿರುವ ನಿರಾಶ್ರಿತ ಶಿಬಿರಗಳಲ್ಲಿನ ಪರಿಸ್ಥಿತಿ ‘ಅತ್ಯಂತ ಗಂಭೀರವಾಗಿದೆ’ ಎಂದು ಹೇಳಿರುವ ಮಾನವಹಕ್ಕುಗಳ ಸಂಘಟನೆ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್, ಅಧಿಕಾರಿಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಇನ್ನಷ್ಟು ರಕ್ತಪಾತ ಸಂಭವಿಸುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದೆ.

‘‘ಈ ಸಂಘರ್ಷದ ಬಲಿಪಶುಗಳು ಅಪರಾಧಿಗಳ ನಡುವೆ ಸಿಕ್ಕಿಹಾಕಿಕೊಳ್ಳುವ ರೊಹಿಂಗ್ಯಾ ನಿರಾಶ್ರಿತರು. ಬಾಂಗ್ಲಾದೇಶ ಅಧಿಕಾರಿಗಳು ರೊಹಿಂಗ್ಯಾ ನಿರಾಶ್ರಿತರ ಸುರಕ್ಷತೆಗಾಗಿ ಶಿಬಿರಗಳ ಒಳಗೆ ಭದ್ರತೆಯನ್ನು ಹೆಚ್ಚಿಸಬೇಕು. ತಕ್ಷಣ ತನಿಖೆ ನಡೆಸಿ ಹಿಂಸೆಗೆ ಕಾರಣರಾದವರನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಬೇಕು’’ ಎಂದು ಹೇಳಿಕೆಯೊಂದರಲ್ಲಿ ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News