×
Ad

ಕೊರೋನ ವೈರಸ್ ನಿರ್ಬಂಧ: ವಿದೇಶಗಳಲ್ಲಿ 27 ಲಕ್ಷ ವಲಸಿಗರು ಬಾಕಿ

Update: 2020-10-09 23:08 IST

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಅ. 9: ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ, ಮನೆಗೆ ವಾಪಸಾಗಬೇಕೆಂದು ಬಯಸಿದ್ದ 27 ಲಕ್ಷಕ್ಕೂ ಅಧಿಕ ವಲಸಿಗರು ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಶುಕ್ರವಾರ ತಿಳಿಸಿದೆ.

ಕೊರೋನ ವೈರಸ್ ನಿರ್ಬಂಧಗಳ ಹೊರತಾಗಿಯೂ ವಲಸಿಗರು ಸುರಕ್ಷಿತವಾಗಿ ತಮ್ಮ ತಾಯ್ನಾಡಿಗೆ ಮರಳುವುದನ್ನು ಖಾತರಿಪಡಿಸಲು ದೇಶಗಳ ನಡುವಿನ ಸಹಕಾರ ಇನ್ನಷ್ಟು ಹೆಚ್ಚಬೇಕಾಗಿದೆ ಎಂದು ವಿಶ್ವಸಂಸ್ಥೆಯ ಅಂತರ್‌ರಾಷ್ಟ್ರೀಯ ವಲಸಿಗರ ಸಂಘಟನೆ ಹೇಳಿದೆ.

ಗಡಿ ಮುಚ್ಚುವಿಕೆ ಮತ್ತು ಪ್ರಯಾಣ ನಿಷೇಧಗಳಿಂದಾಗಿ ಭಾರೀ ಸಂಖ್ಯೆಯ ವಲಸಿಗರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವರದಿಯೊಂದರಲ್ಲಿ ಸಂಘಟನೆ ಎಚ್ಚರಿಸಿದೆ.

ತಾಯ್ನಾಡಿಗೆ ಬರಲಾಗದೆ ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು 27.5 ಲಕ್ಷ ಜನರಿಗಾಗಿ ಹೆಚ್ಚಿನದನ್ನು ಮಾಡುವಂತೆ ಸಂಘಟನೆಯ ಮುಖ್ಯಸ್ಥ ಆಂಟೋನಿಯೊ ವಿಟೊರಿನೊ ದೇಶಗಳನ್ನು ಒತ್ತಾಯಿಸಿದ್ದಾರೆ.

ಸಿಕ್ಕಿಹಾಕಿಕೊಂಡವರಲ್ಲಿ ನಿರ್ದಿಷ್ಟ ಋತುವಿನಲ್ಲಿ ಕೆಲಸ ಮಾಡುವ ಕಾರ್ಮಿಕರು, ತಾತ್ಕಾಲಿಕ ವಾಸ್ತವ್ಯ ಪರವಾನಿಗೆ ಹೊಂದಿದವರು, ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಗಳಿಗೆ ತೆರಳಿದವರು ಹಾಗೂ ಸಮುದ್ರಯಾನಿಗಳು ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News