ಪಾಕ್: ಜನವರಿಗೆ ಮೊದಲ ಇಮ್ರಾನ್ ಸರಕಾರ ಪತನ; ಮರ್ಯಮ್ ನವಾಝ್

Update: 2020-10-13 17:52 GMT

ಇಸ್ಲಾಮಾಬಾದ್, ಅ. 13: ಪಾಕಿಸ್ತಾನದ ಇಮ್ರಾನ್ ಖಾನ್ ಸರಕಾರವು ಜನವರಿಯ ಮುನ್ನ ‘ಮನೆಗೆ ಹೋಗಲಿದೆ’ ಎಂದು ಪಾಕಿಸ್ತಾನ್ ಮುಸ್ಲಿಮ್ ಲೀಗ್ (ನವಾಝ್) ಪಕ್ಷದ ಉಪಾಧ್ಯಕ್ಷೆ ಮರ್ಯಮ್ ನವಾಝ್ ಸೋಮವಾರ ಹೇಳಿದ್ದಾರೆ.

ಇಮ್ರಾನ್ ಸರಕಾರವನ್ನು ಉರುಳಿಸುವ ನಿಟ್ಟಿನಲ್ಲಿ ಪ್ರತಿಪಕ್ಷಗಳು ರೂಪಿಸಿರುವ ಅಭಿಯಾನದ ಮೊದಲ ಹಂತವಾಗಿ ನಡೆಯಲಿರುವ ಬೃಹತ್ ಪ್ರತಿಭಟನಾ ಪ್ರದರ್ಶನಕ್ಕೆ ಕೆಲವೇ ದಿನಗಳು ಇರುವಾಗ ಅವರು ಈ ಹೇಳಿಕೆ ನೀಡಿದ್ದಾರೆ.

ಸೇನಾ ಜನರಲ್ ಪರ್ವೇಝ್ ಮುಶರ್ರಫ್‌ರ ಸೇನಾ ಸರಕಾರ ಇರುವಾಗಲೂ ಪಾಕಿಸ್ತಾನ ಮುಸ್ಲಿಮ್ ಲೀಗ್ (ನವಾಝ್) ಪಕ್ಷವನ್ನು ಈ ಮಟ್ಟದ ‘ದೌರ್ಜನ್ಯ’ಕ್ಕೆ ಗುರಿಪಡಿಸಲಾಗಿರಲಿಲ್ಲ ಎಂದು ಅವರು ಹೇಳಿದರು.

‘‘ಇದನ್ನು ನಾನು ಸರಕಾರ ಎಂದೇ ಮಾನ್ಯ ಮಾಡುವುದಿಲ್ಲ. ಇದಕ್ಕೆ ಸರಕಾರ ಎಂದು ಕರೆಸಿಕೊಳ್ಳುವ ಅರ್ಹತೆಯೇ ಇಲ್ಲ’’ ಎಂದು ಮರ್ಯಮ್ ಹೇಳಿದರು ಎಂದು ‘ಜಿಯೋ ನ್ಯೂಸ್’ ವರದಿ ಮಾಡಿದೆ.

ಭ್ರಷ್ಟಾಚಾರ ಆರೋಪ: ಇಮ್ರಾನ್‌ರ ಆಪ್ತ ಸಹಾಯಕ ರಾಜೀನಾಮೆ

  ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ರ ವಿಶೇಷ ವಾರ್ತಾ ಮತ್ತು ಪ್ರಸಾರ ಸಹಾಯಕ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಆಸಿಮ್ ಸಲೀಮ್ ಬಾಜ್ವ ಸೋಮವಾರ ರಾಜೀನಾಮೆ ನೀಡಿದ್ದಾರೆ. ವಿದೇಶಗಳಲ್ಲಿ ಕುಟುಂಬದ ಉದ್ಯಮಗಳನ್ನು ಸ್ಥಾಪಿಸುವುದಕ್ಕಾಗಿ ಅವರು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಗಳ ಬಳಿಕ ಅವರು ತನ್ನ ಹುದ್ದೆಯನ್ನು ತೊರೆದಿದ್ದಾರೆ.

ಆದರೆ, ಅವರು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಪ್ರಾಧಿಕಾರದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News