ನ್ಯೂಝಿಲ್ಯಾಂಡ್‍ನ ಈ ಕಿಕ್ಕಿರಿದು ತುಂಬಿದ್ದ ಸ್ಟೇಡಿಯಂ ನೋಡಿ ನಿಬ್ಬೆರಗಾದ ಜಗತ್ತು

Update: 2020-10-14 11:44 GMT

ವೆಲ್ಲಿಂಗ್ಟನ್ : ಇತ್ತೀಚೆಗೆ ನ್ಯೂಝಿಲ್ಯಾಂಡ್‍ನ  ವೆಲ್ಲಿಂಗ್ಟನ್ ಸ್ಟೇಡಿಯಂನಲ್ಲಿ ಬ್ಲೆಡಿಸ್ಲೋ ಕಪ್ ಟೆಸ್ಟ್ ಪಂದ್ಯದ ವೇಳೆ ಸಾವಿರಾರು ರಗ್ಬಿ ಅಭಿಮಾನಿಗಳಿಂದ ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣವನ್ನು ನೋಡಿ ಇಡೀ ಜಗತ್ತು ದಂಗಾಗಿದೆ.

ಎಲ್ಲೆಡೆ ಕೋವಿಡ್ ಸಾಂಕ್ರಾಮಿಕ ತಂದೊಡ್ಡಿರುವ ಸಮಸ್ಯೆಯಿಂದ ಸಾಮಾಜಿಕ ಅಂತರ ಕಾಪಾಡುವುದೇ ದೊಡ್ಡ ಸವಾಲಾಗಿರುವಾಗ ನ್ಯೂಝಿಲ್ಯಾಂಡ್‍ನ ಈ ಸ್ಟೇಡಿಯಂನಲ್ಲಿ 30,000 ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಿ ಖುಷಿ ಪಟ್ಟರು. ಅಂದ ಹಾಗೆ  ಸುಮಾರು ಏಳು ತಿಂಗಳ ನಂತರ ನ್ಯೂಝಿಲ್ಯಾಂಡ್‍ ನಲ್ಲಿ ಮೊದಲ ರಗ್ಬಿ ಪಂದ್ಯ ನಡೆದಿತ್ತು. ಅಷ್ಟೇ ಅಲ್ಲ ಅಲ್ಲಿ ನೆರೆದಿದ್ದವರ್ಯಾರೂ ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರವನ್ನೂ ಕಾಪಾಡಿರಲಿಲ್ಲ. ಈ ಸ್ಟೇಡಿಯಂನ ಚಿತ್ರಗಳು ಇದೀಗ ವೈರಲ್ ಆಗಿವೆ.

ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದ ದೃಶ್ಯಗಳನ್ನು ನೋಡಿದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ ಸಾಂಕ್ರಾಮಿಕದ ಸಮಯ ಇದೊಂದು ಬೇಜವಾಬ್ದಾರಿಯುತ ಕ್ರಮ ಎಂದರೆ ಇನ್ನು ಕೆಲವರು  ದೇಶದಲ್ಲಿ ಕೋವಿಡ್ ಸೋಂಕನ್ನು ಯಶಸ್ವಿಯಾಗಿ ನಿಭಾಯಿಸಿದ ಅಲ್ಲಿನ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ದೇಶ ಕೋವಿಡ್ ಮುಕ್ತವಾಗಿದೆ ಎಂದು ಜೂನ್ ತಿಂಗಳಿನಲ್ಲಿ ನ್ಯೂಝಿಲ್ಯಾಂಡ್‍ನ ಪ್ರಧಾನಿ ಘೋಷಿಸಿದ್ದರೂ ಕೆಲ ವಾರಗಳ ನಂತರ ಮತ್ತೆ ಕಠಿಣ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಆದರೆ  ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ನ್ಯೂಝಿಲ್ಯಾಂಡ್‍  ಕೋವಿಡ್ ನಿಯಂತ್ರಣದಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂಬ ಅಭಿಪ್ರಾಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News