ಶೇಕ್ಸ್‌ಪಿಯರ್ ನಾಟಕಗಳ ಪ್ರಥಮ ಸಂಗ್ರಹ ದಾಖಲೆ ಬೆಲೆಗೆ ಹರಾಜು

Update: 2020-10-16 05:06 GMT

ನ್ಯೂಯಾರ್ಕ್, ಅ. 15: ಇಂಗ್ಲಿಷ್ ಸಾಹಿತಿ ವಿಲಿಯಮ್ ಶೇಕ್ಸ್‌ಪಿಯರ್‌ರ ನಾಟಕಗಳ ಪ್ರಥಮ ಸಂಗ್ರಹವಾಗಿರುವ 1623ರ ಅಪರೂಪದ ಪುಸ್ತಕವೊಂದು ಬುಧವಾರ ನಡೆದ ಹರಾಜಿನಲ್ಲಿ ದಾಖಲೆಯ 9.97 ಮಿಲಿಯ ಡಾಲರ್ (ಸುಮಾರು 73 ಕೋಟಿ ರೂಪಾಯಿ)ಗೆ ಹರಾಜಾಗಿದೆ ಎಂದು ನ್ಯೂಯಾರ್ಕ್‌ನ ಹರಾಜು ಸಂಸ್ಥೆ ಕ್ರಿಸ್ಟೀಸ್ ತಿಳಿಸಿದೆ.

ಶೇಕ್ಸ್‌ಪಿಯರ್‌ರ 36 ನಾಟಕಗಳನ್ನು ಒಳಗೊಂಡ ಪುಸ್ತಕ ‘ಫಸ್ಟ್ ಫೋಲಿಯೊ’ದ ಕೇವಲ ಆರು ಸಮಗ್ರ ಪ್ರತಿಗಳು ಈಗ ಖಾಸಗಿ ಜನರ ಕೈಯಲಿದೆ ಎನ್ನಲಾಗಿದೆ. ಈ ಪೈಕಿ ಒಂದು ಪ್ರತಿ ಈಗ ದಾಖಲೆಯ ಬೆಲೆಗೆ ಹರಾಜಾಗಿದೆ. ಅದಕ್ಕೆ 4 ಮಿಲಿಯ ಡಾಲರ್ (ಸುಮಾರು 29 ಕೋಟಿ ರೂಪಾಯಿ)ನಿಂದ 6 ಮಿಲಿಯ ಡಾಲರ್ (ಸುಮಾರು 44 ಕೋಟಿ ರೂಪಾಯಿ) ಮೂಲ ಬೆಲೆಯನ್ನು ನಿಗದಿಪಡಿಸಲಾಗಿತ್ತು.

ಪುಸ್ತಕವನ್ನು ಖರೀದಿಸಿದವರ ವಿವರಗಳು ಲಭ್ಯವಾಗಿಲ್ಲ.

ಶೇಕ್ಸ್‌ಪಿಯರ್ ಮೃತಪಟ್ಟ ಏಳು ವರ್ಷಗಳ ಬಳಿಕ, ಅವರ ನಾಟಕಗಳನ್ನು ಅವರ ಸ್ನೇಹಿತರು ‘ಕಾಮಿಡೀಸ್, ಹಿಸ್ಟರೀಸ್ ಮತ್ತು ಟ್ರಾಜಡೀಸ್’ ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಆ ಪುಸ್ತಕವು, ‘ಮ್ಯಾಕ್ಬೆತ್’ ಮತ್ತು ‘ಜೂಲಿಯಸ್ ಸೀಸರ್’ ಸೇರಿದಂತೆ ಈ ಹಿಂದೆ ಪ್ರಕಟಗೊಳ್ಳದ ಶೇಕ್ಸ್‌ಪಿಯರ್‌ರ 18 ನಾಟಕಗಳನ್ನೂ ಒಳಗೊಂಡಿದೆ.

ಆಧುನಿಕ ವಿಮರ್ಶಕರು ಈ ಪುಸ್ತಕವನ್ನು ಸಾಮಾನ್ಯವಾಗಿ ‘ಫಸ್ಟ್ ಫೋಲಿಯೊ’ ಎಂಬುದಾಗಿ ಕರೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News