ಮಿಂಚಿದ ಡಿಕಾಕ್: ಕೆಕೆಆರ್ ವಿರುದ್ಧ ಮುಂಬೈಗೆ 8 ವಿಕೆಟ್ ಗಳ ಭರ್ಜರಿ ಗೆಲುವು

Update: 2020-10-16 17:45 GMT

ಅಬುಧಾಬಿ: ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಬಾರಿಸಿದ ಭರ್ಜರಿ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿತು.

ಗೆಲುವಿಗೆ 149 ರನ್ ಗುರಿ ಪಡೆದ ಮುಂಬೈ ಇಂಡಿಯನ್ಸ್ 16.5 ಎಸೆತಗಳಲ್ಲಿ ಗೆಲುವಿನ ಗುರಿ ತಲುಪಿತು. 

ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಮತ್ತೊಮ್ಮೆ ತಂಡಕ್ಕೆ ಆಸರೆಯಾದರು. ಅವರು ಕೇವಲ 44 ಎಸೆತಗಳಲ್ಲಿ 78 ರನ್ ಬಾರಿಸಿ ಮಿಂಚಿದರು. ನಾಯಕ ರೋಹಿತ್ ಶರ್ಮಾ 36 ಎಸೆತಗಳಲ್ಲಿ 35 ರನ್ ಗಳಿಸಿದರು.

ಕೊಲ್ಕತ್ತಾ ಪರ ಶಿವಮ್ ಮಾವಿ ಹಾಗೂ ವರುನ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್ ಗಳಲ್ಲಿ 148-5 ಗಳಿಸಿತ್ತು. ಕಳಪೆ ಆರಂಭ ಪಡೆದರೂ ಕೂಡಾ ಕೊನೆಯಲ್ಲಿ ನಾಯಕ ಇಯಾನ್ ಮೋರ್ಗನ್ ಹಾಗೂ ಪ್ಯಾಟ್ ಕಮಿನ್ಸ್ ತಂಡಕ್ಕೆ ನೆರವಾದರು. ಮೋರ್ಗನ್ 29 ಎಸೆತಗಳಲ್ಲಿ 39 ರನ್ ಗಳಿಸಿದರೆ, ಕಮಿನ್ಸ್ 36 ಎಸೆತಗಳಲ್ಲಿ 53 ರನ್ ಸಿಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News