ಇತಿಹಾಸ ನಿರ್ಮಿಸಿದ ಎಂಎಸ್ ಧೋನಿ

Update: 2020-10-19 17:15 GMT

ದುಬೈ: ಐಪಿಎಲ್ ನಲ್ಲಿ ನಾಯಕನಾಗಿ ಗರಿಷ್ಠ ಪಂದ್ಯಗಳಲ್ಲಿ ಜಯ(107) ಹಾಗೂ ಹೆಚ್ಚು ಸ್ಟಂಪಿಂಗ್ (38) ಸಹಿತ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಎಂ.ಎಸ್. ಧೋನಿ ಸೋಮವಾರ ಯಾರೂ ಮುಟ್ಟದ ಮೈಲಿಗಲ್ಲನ್ನು ತಲುಪಿದ್ದಾರೆ. ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಐಪಿಎಲ್ ನಲ್ಲಿ 200 ಪಂದ್ಯಗಳನ್ನು ಆಡಿರುವ ಮೊದಲ ಹಾಗೂ ಏಕೈಕ ಕ್ರಿಕೆಟಿಗನಾಗಿದ್ದಾರೆ.

ರಾಜಸ್ಥಾನ ವಿರುದ್ಧ ಪಂದ್ಯಕ್ಕಿಂತ ಮೊದಲು 199 ಪಂದ್ಯಗಳನ್ನು ಆಡಿರುವ ಧೋನಿ ಅತ್ಯಂತ ಹೆಚ್ಚು ಪಂದ್ಯಗಳಲ್ಲಿ ಆಡಿರುವ ಆಟಗಾರನಾಗಿ ಹೊರಹೊಮ್ಮಿದ್ದು, ಚೆನ್ನೈನ ಸಹ  ಆಟಗಾರ ಸುರೇಶ್ ರೈನಾ ದಾಖಲೆಯನ್ನು ಮುರಿದಿದ್ದಾರೆ. ರಾಜಸ್ಥಾನ ವಿರುದ್ಧ ಐಪಿಎಲ್ ನ 37ನೇ ಪಂದ್ಯ  ಆಡಲು ಸೋಮವಾರ ಟಾಸ್ ಗೆ ಇಳಿದಾಗ ಐಪಿಎಲ್ ನಲ್ಲಿ ದಾಖಲೆ 200 ಪಂದ್ಯಗಳನ್ನು ಆಡಿದ ಸಾಧನೆಗೆ ಪಾತ್ರರಾದರು.

ಧೋನಿ 2008ರಿಂದ ಚೆನ್ನೈ ತಂಡದಲ್ಲಿದ್ದಾರೆ.  200 ಪಂದ್ಯಗಳ ಪೈಕಿ 170 ಪಂದ್ಯಗಳನ್ನು ಚೆನ್ನೈ ಪರ ಆಡಿದ್ದಾರೆ. ಚೆನ್ನೈ ಎರಡು ವರ್ಷ ನಿಷೇಧಕ್ಕೊಳಗಾದ ವೇಳೆ ಇನ್ನುಳಿದ 30 ಪಂದ್ಯಗಳನ್ನು ರೈಸಿಂಗ್ ಪುಣೆ ಸೂಪರ್ ಜೈಂಟ್ ಪರ ಆಡಿದ್ದರು.

 ಮುಂಬೈಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ(197) ಧೋನಿ ದಾಖಲೆಯ ಸಮೀಪದಲ್ಲಿದ್ದಾರೆ. ಈ ತನಕ ಧೋನಿ ಐಪಿಎಲ್ ನಲ್ಲಿ 4,568 ರನ್ ಗಳಿಸಿದ್ದು, ಚೆನ್ನೈ ಪರವಾಗಿಯೇ 3,994 ರನ್ ಗಳಿಸಿದ್ದರು. ಐಪಿಎಲ್ ನಲ್ಲಿ ಗರಿಷ್ಠ ಪಂದ್ಯ ಆಡಿರುವ ಅಗ್ರ-5ರ ಪಟ್ಟಿಯಲ್ಲಿ  ಕೋಲ್ಕತಾದ ವಿಕೆಟ್ ಕೀಪರ್-ದಾಂಡಿಗ ದಿನೇಶ್ ಕಾರ್ತಿಕ್ (191 ಪಂದ್ಯ), ಸುರೇಶ್ ರೈನಾ(193) ಹಾಗೂ ವಿರಾಟ್ ಕೊಹ್ಲಿ(186)ಅವರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News