ನಾಗರಿಕರ ವೀಸಾರಹಿತ ಪ್ರಯಾಣಕ್ಕೆ ಯುಎಇ, ಇಸ್ರೇಲ್ ಒಪ್ಪಂದ: ಇಸ್ರೇಲ್ ಪ್ರಧಾನಿ ನೆತನ್ಯಾಹು ಘೋಷಣೆ

Update: 2020-10-20 16:14 GMT

ಟೆಲ್ ಅವೀವ್ (ಇಸ್ರೇಲ್), ಅ. 20: ತಮ್ಮ ನಾಗರಿಕರು ಪರಸ್ಪರದ ದೇಶಗಳಿಗೆ ವೀಸಾರಹಿತವಾಗಿ ಪ್ರಯಾಣಿಸಲು ಯುಎಇ ಮತ್ತು ಇಸ್ರೇಲ್ ಒಪ್ಪಿಕೊಂಡಿವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಹೇಳಿದ್ದಾರೆ.

ಮೊದಲ ಅಧಿಕೃತ ಯುಎಇ ನಿಯೋಗವು ಮಂಗಳವಾರ ಟೆಲ್ ಅವೀವ್ ಸಮೀಪದ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.

‘‘ನಾವಿಂದು ಇತಿಹಾಸ ಸೃಷ್ಟಿಸುತ್ತಿದ್ದೇವೆ. ಇದು ಯುಎಇ ನಿಯೋಗವೊಂದರ ಮೊದಲ ಅಧಿಕೃತ ಭೇಟಿಯಾಗಿದೆ. ಇಂದು ನಾವು ಆರ್ಥಿಕತೆ, ವಿಜ್ಞಾನ, ತಂತ್ರಜ್ಞಾನ ಮತ್ತು ವಾಯುಯಾನ ಕ್ಷೇತ್ರಗಳ ಸ್ಥಿತಿಗತಿಗಳನ್ನು ಬದಲಿಸಲಿರುವ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಲಿದ್ದೇವೆ’’ ಎಂದು ಬೆನ್ ಗುರಿಯನ್ ವಿಮಾನನಿಲ್ದಾಣದಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ನೆತನ್ಯಾಹು ಹೇಳಿದರು.

ಈ ವೀಸಾ ವಿನಾಯಿತಿಯೊಂದಿಗೆ, ಎರಡು ದೇಶಗಳ ನಾಗರಿಕರು ಗಡಿಯಾಚೆಗೆ ಮುಕ್ತವಾಗಿ ಪ್ರಯಾಣಿಸಬಹುದಾಗಿದೆ ಎಂದು ಅವರು ಹೇಳಿದರು.

ಉಭಯ ದೇಶಗಳ ನಡುವಿನ ಸಂಬಂಧವನ್ನು ಸಾಮಾನ್ಯ ಸ್ಥಿತಿಗೆ ತರುವ ಉದ್ದೇಶದ ಶಾಂತಿ ಒಪ್ಪಂದಕ್ಕೆ ಯುಎಇ ಮತ್ತು ಇಸ್ರೇಲ್‌ಗಳು ಅಮೆರಿಕದ ಅಧ್ಯಕ್ಷೀಯ ಕಚೇರಿ ಶ್ವೇತಭವನದಲ್ಲಿ ಸೆಪ್ಟಂಬರ್ 15ರಂದು ಸಹಿ ಹಾಕಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News