ಸೋಲಿನ ಸರಪಳಿ ಕಳಚಿದ ಚೆನ್ನೈ: ಆರ್‌ಸಿಬಿ ವಿರುದ್ಧ 8 ವಿಕೆಟ್ ಗೆಲುವು

Update: 2020-10-25 13:16 GMT

ದುಬೈ, ಅ.25: ಸತತ ಸೋಲುಗಳ ಸುಳಿಯಲ್ಲಿ ಸಿಲುಕಿದ್ದ ಎಂ.ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊನೆಗೂ ಗೆಲುವಿನ ಹಳಿ ಏರಲು ಯಶಸ್ವಿಯಾಗಿದೆ.

ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಚೆನ್ನೈ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿತು. ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಸಿಎಸ್‌ಕೆ ಪಾಲಿಗೆ ಈ ಗೆಲುವು ಕೊಂಚ ಸಮಾಧಾನ ತಂದುಕೊಟ್ಟರೆ, ಬೆಂಗಳೂರು 11 ಪಂದ್ಯಗಳಲ್ಲಿ ನಾಲ್ಕನೇ ಸೋಲನುಭವಿಸಿತು.

ಗೆಲುವಿಗೆ 146 ರನ್ ಗುರಿ ಪಡೆದ ಚೆನ್ನೈ 18.4 ಓವರ್ ಗಳಲ್ಲಿ ಗುರಿ ತಲುಪಿತು. ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅರ್ಧಶತಕ ಬಾರಿಸಿ ಮಿಂಚಿದರು. ಅವರು 51 ಎಸೆತಗಳಲ್ಲಿ 65 ರನ್ ಗಳಿಸಿ ಔಟಾಗದೇ ಉಳಿದರು. ಉಳಿದಂತೆ ಡುಪ್ಲೆಸಿಸ್ 25 (13 ಎಸೆತ) ಅಂಬಟಿ ರಾಯುಡು 39( 27 ಎಸೆತ) ನಾಯಕ ಧೋನಿ 19 (21 ಎಸೆತ) ರನ್ ಗಳಿಸಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕ್ರಿಸ್ ಮೋರಿಸ್ ಹಾಗೂ ಚಾಹಲ್ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ 145/6 ಗಳಿಸಿತು. ಶಿಸ್ತುಬದ್ಧ ಬೌಲಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಾಧಾರಣ ಮೊತ್ತ ದಾಖಲಿಸಿ, ಚೆನ್ನೈ ಗೆಲುವಿಗೆ 146 ರನ್ ಗುರಿ ನೀಡಿತ್ತು.

ನಾಯಕ ವಿರಾಟ್ ಕೊಹ್ಲಿ 43 ಎಸೆತಗಳಲ್ಲಿ 50 ರನ್ ಹಾಗೂ ಎಬಿಡಿ ವಿಲಿಯರ್ಸ್ 36 ಎಸೆತಗಳಲ್ಲಿ 39 ರನ್ ಬಾರಿಸಿದರು. ಚೆನ್ನೈ ಪರ ಸ್ಯಾಮ್ ಕರ್ರನ್ 3, ದೀಪಕ್ ಚಾಹರ್ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News