ಹಠಾತ್ ನಿವೃತ್ತಿ ಬಳಿಕ ಕಟ್ಟಾ ಎದುರಾಳಿ ಮೆಕ್ ಗ್ರೆಗರ್ ಬಗ್ಗೆ ಖಬೀಬ್ ಹೇಳಿದ್ದೇನು?

Update: 2020-10-25 16:55 GMT

ಅಬುಧಾಬಿ: ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್‌ಶಿಪ್‌ನ ಸೂಪರ್ ಸ್ಟಾರ್ ಖಬೀಬ್ ನೂರ್ ಮೊಹಮದೊವ್ ಅಬುಧಾಬಿಯಲ್ಲಿ ಶನಿವಾರ ನಡೆದ ಸ್ಪರ್ಧೆಯಲ್ಲಿ ಅಮೆರಿಕದ ಜಸ್ಟಿನ್ ಗೇತ್‌ಜೆ ಅವರನ್ನು ಸೋಲಿಸಿ ಯುಎಫ್‌ಸಿ ಲೈಟ್‌ವೇಟ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ ಬೆನ್ನಿಗೇ ತಾನು ಕ್ರೀಡೆಯಿಂದ ನಿವೃತ್ತಿಯಾಗುವುದಾಗಿಯೂ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಯುಎಫ್‌ಸಿಯಿಂದ ನಿವೃತ್ತಿ ಘೋಷಿಸಿದ ಬಳಿಕ ಕಾನರ್ ಮೆಕ್‌ಗ್ರೆಗರ್ ಅವರನ್ನು ಮತ್ತೆ ಎದುರಿಸಲು ನನಗೆ ಆಸಕ್ತಿ ಇಲ್ಲ ಎಂದು ಖಬೀಬ್ ಹೇಳಿದ್ದಾರೆ.

2018ರಲ್ಲಿ ಖಬೀಬ್ ಹಾಗೂ ಮೆಕ್‌ಗ್ರೆಗರ್ ನಡುವೆ ಭಾರೀ ಹೋರಾಟ ನಡೆದಿತ್ತು. ಉಭಯ ಫೈಟರ್‌ಗಳ ಬೆಂಬಲಿಗರ ನಡುವೆ ಘರ್ಷಣೆಯೂ ನಡೆದು ಅಹಿತಕರ ದೃಶ್ಯಕ್ಕೆ ಕಾರಣವಾಗಿತ್ತು. "ದೇವರು ನನಗೆ ಎಲ್ಲವನ್ನೂ ನೀಡಿದ್ದಾರೆ. ಇದು ನನ್ನ ಕೊನೆಯ ಹೋರಾಟವಾಗಿತ್ತು. ಜಸ್ಟಿನ್ ವಿರುದ್ಧ ಇದು ನನ್ನ ಕೊನೆಯ ಹೋರಾಟವಾಗಿದೆ ಎಂದು ನನ್ನ ತಾಯಿ ಬಳಿ ಹೇಳಿದ್ದೆ. ಇದು ನನ್ನ ಅಂತಿಮ ಫೈಟ್ ಆಗಿರುತ್ತದೆ ಎಂದು ತಾಯಿಗೆ ಭರವಸೆ ನೀಡಿದ್ದೆ. ನಾನು ಅವರಿಗೆ ಮಾತು ಕೊಟ್ಟಿದ್ದೇನೆ. ಅದನ್ನು ಅನುಸರಿಸಬೇಕಾಗಿದೆ" ಎಂದು ಖಬೀಬ್ ಹೇಳಿದ್ದಾರೆ.

"ನಾನು ಲೊರೆಂರೊ(ಫೆರ್ಟಿಟಾ), ಡಾನಾ(ವೈಟ್), ಹಂಟರ್(ಕ್ಯಾಂಪ್‌ಬೆಲ್)ಗೆ ಧನ್ಯವಾದ ಹೇಳಲು ಬಯಸುವೆ. ಈ ಯುಎಫ್‌ಸಿ ತಂಡದವರೆಲ್ಲರಿಗೂ ಧನ್ಯವಾದ ಹೇಳುವೆ. ವಿಶ್ವದ ಎಲ್ಲರಿಗೂ ಧನ್ಯವಾದಗಳು. ಜಸ್ಟಿನ್ ನೀವು ನನಗೆ ತುಂಬಾ ನೆರವು ನೀಡಿದ್ದೀರಿ. ನೀವು ಶ್ರೇಷ್ಟ ವ್ಯಕ್ತಿ ಎಂದು ನನಗೆ ಗೊತ್ತಿದೆ ಎಂದು ಖಬೀಬ್ ಹೇಳಿದ್ದಾರೆ.

"ಉತ್ತಮ ಪ್ರದರ್ಶನ ನೀಡಿದ್ದೀರಿ ಖಬೀಬ್. ನಾನು ವೃತ್ತಿಜೀವನ ಮುಂದುವರಿಸುತ್ತೇನೆ. ನಿಮ್ಮ ತಂದೆಗೆ ಮತ್ತೊಮ್ಮೆ ಗೌರವ ಹಾಗೂ ಸಂತಾಪ ಸೂಚಿಸುವೆ" ಎಂದು ಖಬೀಬ್ ದಿಢೀರ್ ನಿವೃತ್ತಿಯ ಕುರಿತು ಮೆಕ್‌ಗ್ರೆಗರ್ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News