ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ಐಪಿಎಲ್‌ನ ಐದನೇ ಆಟಗಾರ

Update: 2020-10-25 14:35 GMT

ದುಬೈ:ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ನಾಯಕ ವಿರಾಟ್ ಕೊಹ್ಲಿ ಇಂಡಿಯನ್‌ಪ್ರೀಮಿಯರ್ ಲೀಗ್(ಐಪಿಎಲ್)ಇತಿಹಾಸದಲ್ಲಿ 200 ಸಿಕ್ಸರ್‌ಗಳನ್ನು ಸಿಡಿಸಿದ ಐದನೇ ಆಟಗಾರನೆಂಬ ಕೀರ್ತಿಗೆ ಭಾಜನರಾದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರವಿವಾರ ನಡೆದ 44ನೇ ಲೀಗ್ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದರು.

ಕೊಹ್ಲಿ ಅವರು ಎಂ.ಎಸ್. ಧೋನಿ(216)ಹಾಗೂ ರೋಹಿತ್ ಶರ್ಮಾ(209) ಬಳಿಕ ಈ ಸಾಧನೆ ಮಾಡಿರುವ ಭಾರತದ ಮೂರನೇ ಬ್ಯಾಟ್ಸ್‌ಮನ್ ಎನ್ನುವ ಕೀರ್ತಿಗೂ ಭಾಜನರಾದರು.

 ಕ್ರಿಸ್ ಗೇಲ್(336 ಸಿಕ್ಸರ್) ಹಾಗೂ ಎಬಿಡಿ ವಿಲಿಯರ್ಸ್(231 ಸಿಕ್ಸರ್) ಐಪಿಎಲ್‌ನಲ್ಲಿ ಗರಿಷ್ಠ ಸಿಕ್ಸರ್ ಸರದಾರರ ಪಟ್ಟಿಯಲ್ಲಿರುವ ಇನ್ನಿಬ್ಬರು ಆಟಗಾರರಾಗಿದ್ದಾರೆ.

31ರ ಹರೆಯದ ಕೊಹ್ಲಿ ಆರ್‌ಸಿಬಿ ಬ್ಯಾಟಿಂಗ್‌ನ ಮೊದಲ ಇನಿಂಗ್ಸ್‌ನ 17ನೇ ಓವರ್‌ನಲ್ಲಿ ಈ ಸಾಧನೆ ಮಾಡಿದರು. ಟಾಸ್ ಜಯಿಸಿದ್ದ ಆರ್‌ಸಿಬಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆಲ್‌ರೌಂಡರ್ ರವೀಂದ್ರ ಜಡೇಜ ಬೌಲಿಂಗ್‌ನಲ್ಲಿ ಮುನ್ನುಗ್ಗಿ ಆಡಿದ ಕೊಹ್ಲಿ ಸಿಕ್ಸರ್ ಸಿಡಿಸುವ ವಿಚಾರದಲ್ಲಿ ದ್ವಿಶತಕ ದಾಖಲಿಸಿದರು.

ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145ರನ್ ಗಳಿಸಿತ್ತು. 43ಎಸೆತಗಳಲ್ಲಿ 50 ರನ್ ಗಳಿಸಿದ್ದ ಕೊಹ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News