​ಐಪಿಎಲ್ ನಾಕೌಟ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ: ಫೈನಲ್ ನಡೆಯುವುದೆಲ್ಲಿ?

Update: 2020-10-26 03:46 GMT

ದುಬೈ, ಅ.26: ಪ್ರಸಕ್ತ ಋತುವಿನ ಐಪಿಎಲ್‌ನ ನಾಕೌಟ್ ಪಂದ್ಯಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ರವಿವಾರ ಬಿಡುಗಡೆ ಮಾಡಿದೆ. ಪ್ಲೇ ಆಫ್ ಮತ್ತು ಫೈನಲ್ ಪಂದ್ಯ ದುಬೈ ಮತ್ತು ಅಬುಧಾಬಿಯಲ್ಲಿ ನವೆಂಬರ್ 5ರಿಂದ 10ರವರೆಗೆ ನಡೆಯಲಿವೆ.

ಕ್ವಾಲಿಫೈಯರ್ 1 ನವೆಂಬರ್ 5ರಂದು ದುಬೈನಲ್ಲಿ ನಡೆಯಲಿದೆ. 2ನೇ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಕ್ರಮವಾಗಿ ನವೆಂಬರ್ 6 ಮತ್ತು 8ರಂದು ಅಬುಧಾಬಿಯ ಶೇಖ್ ಝಾಯೇದ್ ಸ್ಟೇಡಿಯಂನಲ್ಲಿ ನಡೆಯಲಿದೆ. ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನವೆಂಬರ್ 10ರಂದು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 7:30ಕ್ಕೆ ಫೈನಲ್ ಪಂದ್ಯ ನಡೆಯಲಿದ್ದು, ಇದರೊಂದಿಗೆ ಈ ಬಾರಿಯ ಐಪಿಎಲ್‌ಗೆ ತೆರೆ ಬೀಳಲಿದೆ.

ಅಂತೆಯೇ ಮೂರು ತಂಡಗಳು ಭಾಗವಹಿಸುವ ಮಹಿಳಾ ಟಿ-20 ಚಾಲೆಂಜ್ ವೇಳಾಪಟ್ಟಿಯನ್ನು ಕೂಡಾ ಬಿಸಿಸಿಐ ಬಿಡುಗಡೆ ಮಾಡಿದೆ. ಈ ಪಂದ್ಯಗಳು ನವೆಂಬರ್ 4ರಿಂದ 9ರವರೆಗೆ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ. ಅಖಿಲ ಭಾರತ ಮಹಿಳಾ ಆಯ್ಕೆ ಸಮಿತಿಯ ನಿರ್ಧಾರದಂತೆ ವೆಲಾಸಿಟಿ ತಂಡಕ್ಕೆ ಮಾನಸಿ ಜೋಶಿ ಅವರ ಬದಲು ಮೇಘನಾ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಪ್ರಕಟನೆ ಹೇಳಿದೆ.

ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಮೂರು ಸ್ಥಾನಗಳಲ್ಲಿವೆ. ಎಲ್ಲ ಮೂರು ತಂಡಗಳು ತಲಾ 14 ಅಂಕಗಳನ್ನು ಹೊಂದಿದ್ದು, ನಿವ್ವಳ ರನ್ ರೇಟ್ ಆಧಾರದಲ್ಲಿ ಸ್ಥಾನ ಬದಲಾಗಿದೆ. ಪ್ಲೇ ಆಫ್ ಸ್ಥಾನ ಗಳಿಸಿಕೊಳ್ಳಲು ಜಯ ಮೂರೂ ತಂಡಗಳಿಗೆ ಅನಿವಾರ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News