ಇದೇ ಮೊದಲ ಬಾರಿ ತಾಳ್ಮೆ ಕಳೆದುಕೊಂಡ ಕ್ರಿಸ್ ಗೇಲ್, ಕಾರಣವೇನು ಗೊತ್ತೇ?

Update: 2020-10-30 17:58 GMT

ಅಬುಧಾಬಿ: ರಾಜಸ್ಥಾನ ರಾಯಲ್ಸ್ ವಿರುದ್ಧ ಶುಕ್ರವಾರ ನಡೆದ ಅತ್ಯಂತ ಮಹತ್ವದ 50ನೇ ಐಪಿಎಲ್ ಲೀಗ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರಂಭಿಕ ಬ್ಯಾಟ್ಸ್ ಮನ್ ಮನ್ ದೀಪ್ ಸಿಂಗ್ ವಿಕೆಟನ್ನು ಮೊದಲ ಓವರ್ ನಲ್ಲೇ ಕಳೆದುಕೊಂಡಿತು. ಹೀಗಾಗಿ ‘ಯುನಿವರ್ಸ್ ಬಾಸ್’ ಖ್ಯಾತಿಯ ಕ್ರಿಸ್ ಗೇಲ್ ಬೇಗನೆ ಕ್ರೀಸ್ ಗೆ ಇಳಿದರು.

ಎಡಗೈ ಬ್ಯಾಟ್ಸ್ ಮನ್ ಗೇಲ್ ಎದುರಾಳಿ ಬೌಲರ್ ಗಳನ್ನು ಚೆನ್ನಾಗಿ ದಂಡಿಸಿ ನಾಯಕ ಕೆ.ಎಲ್ .ರಾಹುಲ್ ಜೊತೆಗೆ ಮೊದಲ ವಿಕೆಟ್ ಗೆ 120 ರನ್ ಸೇರಿಸಿದರು. ಶತಕದತ್ತ ಕಣ್ಣು ನೆಟ್ಟಿದ್ದ ಗೇಲ್ ಅಂತಿಮ  ಓವರ್ ಆರಂಭದಲ್ಲಿ 92 ರನ್ ಗಳಿಸಿದ್ದರು. ಜೋಫ್ರಾ ಆರ್ಚರ್ ಎಸೆದ ಕೊನೆಯ ಓವರ್ ನಲ್ಲಿ ಸಿಕ್ಸರ್ ಸಿಡಿಸಿದ ಗೇಲ್ 99 ರನ್ ಗಳಿಸಿದರು. ಇನ್ನೇನು ಮೂರಂಕೆ ತಲುಪಲು ಒಂದು ರನ್ ಗಳಿಸಬೇಕು ಎನ್ನುವಷ್ಟರಲ್ಲಿ ಜೋಫ್ರಾ ಆರ್ಚರ್ ಅವರ ಅದ್ಭುತ ಯಾರ್ಕರ್ ಗೆ  ಕ್ಲೀನ್ ಬೌಲ್ಡ್ ಆಗಿ ಶತಕ ವಂಚಿತರಾದರು. ಸಾಮಾನ್ಯವಾಗಿ ಶತಕ ವಂಚಿತರಾದರೆ ಹೆಚ್ಚು ಪ್ರತಿಕ್ರಿಯೆ ನೀಡದ ಗೇಲ್ ಇಂದು ಮಾತ್ರ ತೀವ್ರ ಬೇಸರದಿಂದ ಬ್ಯಾಟ್ ನ್ನು ಜೋರಾಗಿ ಬೀಸಿದರು. ಆದರೆ ಬ್ಯಾಟ್ ಅವರ ಕೈಯಿಂದ ಜಾರಿ ಶಾರ್ಟ್ ಮಿಡ್ ವಿಕೆಟ್ ನಲ್ಲಿ ಬಿತ್ತು.

ಬಳಿಕ ಸಮಾಧಾನದಿಂದ ಬ್ಯಾಟನ್ನು ಎತ್ತಿಕೊಂಡ ಗೇಲ್ ಪೆವಿಲಿಯನ್ ನತ್ತ ತೆರಳುವಾಗ ಬ್ಯಾಟ್ ಗೆ  ಹೆಲ್ಮೆಟ್ ನ್ನು ಸಿಕ್ಕಿಸಿಕೊಂಡು ಸಂಭ್ರಮಾಚರಿಸಿದರು. ಪೆವಿಲಿಯನ್ ಗೆ ವಾಪಸಾಗುವ ಮೊದಲು ತಮ್ಮದೆ ದೇಶದ ವೇಗದ ಬೌಲರ್ ಆರ್ಚರ್ ಗೆ ಅಭಿನಂದನೆ ಸಲ್ಲಿಸಲು ಮರೆಯಲಿಲ್ಲ.

ರಿಯಾನ್ ರಿಂದ ಜೀವದಾನ ಪಡೆದಿದ್ದ ವೆಸ್ಟ್ ಇಂಡೀಸ್ ದಂತಕತೆ  ಗೇಲ್ 63 ಎಸೆತ ಗಳ ಇನಿಂಗ್ಸ್ ನಲ್ಲಿ 6 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿದ್ದರು. ಗೇಲ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಪಂಜಾಬ್ 20 ಓವರ್ ಗಳಲ್ಲಿ 185 ರನ್ ಗಳಿಸಿತು. ಗೇಲ್ ರನ್ನು ಔಟ್ ಮಾಡಿದ್ದ ಆರ್ಚರ್ 26 ರನ್ ನೀಡಿ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News