ಟರ್ಕಿ ಭೂಕಂಪ: 18 ತಾಸು ಅವಶೇಷಗಳಡಿ ಸಿಲುಕಿದ್ದ ತಾಯಿ, 3 ಮಕ್ಕಳು ಪಾರು

Update: 2020-10-31 16:31 GMT

 ಇಝ್ಮಿರ್,ಅ.31: ಟರ್ಕಿಯ ಬಂದರುನಗರ ಇಝ್ಮಿರ್‌ನಲ್ಲಿ ಶುಕ್ರವಾರ ಭೀಕರ ಭೂಕಂಪ ಸಂಭವಿಸಿದ ಸಂದರ್ಭ ಕುಸಿದುಬಿದ್ದ ಕಟ್ಟಡ ಅವಶೇಷಗಳಡಿಯಲ್ಲಿ 18 ತಾಸುಗಳಿಗೂ ಅಧಿಕ ಸಮಯದವರೆಗೆ ಸಿಲುಕಿಕೊಂಡಿದ್ದ ಓರ್ವ ಮಹಿಳೆ ಹಾಗೂ ಆಕೆಯ ಮೂವರು ಮಕ್ಕಳನ್ನು ಶನಿವಾರ ರಕ್ಷಿಸಲಾಗಿದೆ.

 ಇಝ್ಮಿರ್ ನಗರದಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 20ಕ್ಕೂ ಅಧಿಕ ಕಟ್ಟಡಗಳು ಕುಸಿದು ಬಿದ್ದಿದ್ದು, ಅಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಈವರೆಗೆ 100ಕ್ಕೂ ಅಧಿಕ ಮಂದಿಯನ್ನು ಅವಶೇಷಗಳಡಿಯಿಂದ ಪಾರು ಮಾಡಲಾಗಿದೆಯೆಂದು ಟರ್ಕಿಯ ಪರಿಸರಸಚಿವ ಮುರಾತ್ ಕುರುಮ್ ತಿಳಿಸಿದ್ದಾರೆ.

  ಭೂಕಂಪದಿಂದಾಗಿ ಟರ್ಕಿಯ ಪಶ್ಚಿಮದ ಕರಾವಳಿ ಪ್ರದೇಶಗಳಲ್ಲಿ 25ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ನೆರೆಯ ರಾಷ್ಟ್ರವಾದ ಗ್ರೀಸ್‌ಗೆ ಸೇರಿದ ಸಾಮೋಸ್ ದ್ವೀಪದಲ್ಲಿಯೂ ಮನೆಯೊಂದರ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವಿಗೀಡಾಗಿದ್ದಾರೆ. ಟರ್ಕಿಯಲ್ಲಿ ಭೂಕಂಪದಿಂದಾಗಿ 800ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಭೂಕಂಪದ ಬಳಿಕ 520ಕ್ಕೂ ಅಧಿಕ ಪಶ್ಚಾತ್ ಕಂಪನಗಳು ಉಂಟಾಗಿರುವುದಾಗಿ ದೇಶದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News