ಚಳಿಗಾಲದಲ್ಲಿ ಕೊರೋನ ಉಲ್ಬಣ ಸಾಧ್ಯತೆ: ಬ್ರಿಟನ್‌ನಲ್ಲಿ ಮತ್ತೆ ಲಾಕ್‌ಡೌನ್ ?

Update: 2020-10-31 16:52 GMT

ಪ್ಯಾರಿಸ್,ಅ.31: ಚಳಿಗಾಲದಲ್ಲಿ ಕೊರೋನ ವೈರಸ್ ಸೋಂಕಿನ ಹಾವಳಿ ಮತ್ತೆ ಉಲ್ಬಣಿಸಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಬ್ರಿಟಿಶ್ ಸರಕಾರವು ಮತ್ತೆ ಲಾಕ್‌ಡೌನ್‌ಗೆ ಮೊರೆಹೋಗಲು ಚಿಂತಿಸುತ್ತಿದೆ.

 ಚಳಿಗಾಲದಲ್ಲಿ ರೋಗಿಗಳ ಆಸ್ಪತ್ರೆ ದಾಖಲಾತಿ ಹಾಗೂ ಸಾವಿನ ಸಂಖ್ಯೆಯು ಬೇಸಿಗೆಕಾಲದಲ್ಲಿದ್ದ ಸೋಂಕಿನ ಉತ್ತುಂಗಾವಸ್ಥೆಯನ್ನು ಮೀರಿಸಲಿದೆ ಎಂದು ವೈಜ್ಞಾನಿಕ ಸಲಹೆಗಾರರು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಬ್ರಿಟಿಶ್ ಸರಕಾರವು ಮತ್ತೆ ದೇಶಾದ್ಯಂತ ಲಾಕ್‌ಡೌನ್ ಹೇರಲು ಮುಂದಾಗಿದೆ.

  ಅಕ್ಟೋಬರ್ ತಿಂಗಳ ಆರಂಭದಲ್ಲಿ ಕೊರೋನ ಸೋಂಕಿನ ಪ್ರಕರಣಗಳು, ತಜ್ಞರು ಊಹಿಸಿದ್ದಕ್ಕಿಂತಲೂ ಅಧಿಕವಾಗಿತ್ತು ಎಂದು ಬ್ರಿಟಿಶ್ ಸರಕಾರದ ವೈಜ್ಞಾನಿಕ ಸಲಹಾ ಸಮಿತಿಯ ಸದಸ್ಯ ಹಾಗೂ ಸಾಂಕ್ರಾಮಿಕ ರೋಗ ತಜ್ಞ ಜಾನ್ ಎಡ್ಮಂಡ್ಸ್ ತಿಳಿಸಿದ್ದಾರೆ.

   ಸೋಂಕಿನ ಪ್ರಮಾಣವನ್ನು ಆಧರಿಸಿ ಬ್ರಿಟಿಶ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಬ್ರಿಟನ್‌ನ ವಿವಿಧ ನಗರಗಳಲಿ ಸ್ಥಳೀಯ ಮಟ್ಟದಲ್ಲಿ ನಿರ್ಬಂಧಗಳನ್ನು ವಿಧಿಸಿದ್ದಾರೆ. ಆದರೆ ಈ ನಿರ್ಬಂಧಗಳಿಂದ ಕೊರೋನ ಸೋಂಕಿನ ಹಾವಳಿಯನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಸಾಕಾಗಲಾರದೆಂದು ತಜ್ಞರು ಅಭಿಪ್ರಾಯಿಸಿದ್ದಾರೆ.

 ಸೋಮವಾರದಿಂದ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಒಂದು ತಿಂಗಳ ಲಾಕ್‌ಡೌನ್ ಘೋಷಿಸುವ ಸಾಧ್ಯತೆಯಿದೆಯೆಂದು ‘ಟೈಮ್ಸ್ ಆಫ್ ಲಂಡನ್’ ಪತ್ರಿಕೆ ವರದಿ ಮಾಡಿದೆ. ಆದಾಗ್ಯೂ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲವೆಂದು ಬ್ರಿಟಿಶ್ ಸರಕಾರವು ಸ್ಪಷ್ಟಪಡಿಸಿದೆ.

   ನೂತನ ಲಾಕ್‌ಡೌನ್‌ನಲ್ಲಿ ಅತ್ಯಗತ್ಯವಲ್ಲದ ಯಾವುದೇ ಉದ್ಯಮ, ವಹಿವಾಟುಗಳನ್ನು ಮುಚ್ಚುವ ಹಾಗೂ ಜನರಿಗೆ ಮನೆಯೊಳಗೆ ಉಳಿದುಕೊಳ್ಳುವಂತೆ ಸೂಚನೆ ನೀಡುವ ಸಾಧ್ಯತೆಯಿದೆ ಆದರೆ ಶಾಲಾ, ಕಾಲೇಜುಗಳು ತೆರೆದಿಡಲಾಗುವುದೆಂದು ಮೂಲಗಳು ಹೇಳಿವೆ.

ಬ್ರಿಟನ್‌ನಲ್ಲಿ ಅಕ್ಟೋಬರ್‌ನಲ್ಲಿ ಪ್ರತಿದಿನ ಸರಾಸರಿ 20 ಸಾವಿರ ಕೊರೋನ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ನೈಜ ಸೋಂಕಿನ ಪ್ರಕರಣಗಳ ಸಂಖ್ಯೆ ಇದಕ್ಕಿಂತಲೂ ಅಧಿಕವಾಗಿದೆಯೆಂದು ಸರಕಾರದ ಅಂಕಿಅಂಶ ತಜ್ಞರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News