ನಿರ್ಣಾಯಕ ಪಂದ್ಯದಲ್ಲಿ ಕೆಕೆಆರ್ ಗೆಲುವಿನ ಕೇಕೆ

Update: 2020-11-01 18:14 GMT

ದುಬೈ: ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಕರಾರುವಾಕ್ ಬೌಲಿಂಗ್ (4-34)  ನೆರವಿನಿಂದ ಗೆಲ್ಲಲೇಬೇಕಾದ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ಲೇ ಆಫ್ ಹಂತಕ್ಕೇರುವ ವಿಶ್ವಾಸವನ್ನು ಜೀವಂತವಾಗಿರಿಸಿಕೊಂಡಿದೆ.

ಕೋಲ್ಕತಾ ತಾನಾಡಿರುವ 14 ಪಂದ್ಯಗಳಲ್ಲಿ ಇಂದು 7ನೇ ಜಯ ಸಾಧಿಸಿ 14 ಅಂಕ ಗಳಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಉತ್ತಮ ರನ್ ರೇಟ್ ಆಧಾರದಲ್ಲಿ ಮುಂದಿನ ಸುತ್ತಿಗೇರುವ ವಿಶ್ವಾಸದಲ್ಲಿದೆ.

ಇಲ್ಲಿ ರವಿವಾರ ನಡೆದ ಐಪಿಎಲ್ ಟೂರ್ನಿಯ 54ನೇ ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತಾ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 191 ರನ್ ಗಳಿಸಿದೆ. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ್ದ ರಾಜಸ್ಥಾನ ತಂಡ ಯಾವ ಹಂತದಲ್ಲೂ ಹೋರಾಟವನ್ನೇ ನೀಡದೆ 20 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 131 ರನ್ ಗಳಿಸಿ 60 ರನ್ ಗಳ ಅಂತರದಿಂದ ಸೋಲೊಪ್ಪಿಕೊಂಡಿತು.  13ನೇ ಆವೃತ್ತಿಯ ಟೂರ್ನಿಯಲ್ಲಿ ತನ್ನ ಅಭಿಯಾನ ಕೊನೆಗೊಳಿಸಿತು.

ರಾಜಸ್ಥಾನದ ಪರವಾಗಿ ಜೋಸ್ ಬಟ್ಲರ್ (35, 22ಎಸೆತ, 4 ಬೌಂಡರಿ, 1 ಸಿಕ್ಸರ್) , ರಾಹುಲ್ ತೆವಾತಿಯಾ(31,27 ಎಸೆತ), ಎಸ್.ಗೋಪಾಲ್ (ಔಟಾಗದೆ 23) ಎರಡಂಕೆಯ ಸ್ಕೋರ್ ಗಳಿಸಿದರು.

ಕಮಿನ್ಸ್ (4-34) ರಾಜಸ್ಥಾನದ ರನ್ ವೇಗಕ್ಕೆ ಕಡಿವಾಣ ಹಾಕಿದರೆ, ಶಿವಂ ಮಾನಿ(2-15) ಹಾಗೂ ವರುಣ್(2-20) ತಲಾ ಎರಡು ವಿಕೆಟ್ ಗಳನ್ನು ಕಬಳಿಸಿ ಕಮಿನ್ಸ್ ಗೆ ಸಾಥ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News