ಐಪಿಎಲ್2020 ಎಲಿಮಿನೇಟರ್: ಹೈದರಾಬಾದ್ ಗೆ ಸುಲಭ ಗುರಿ ನೀಡಿದ ಕೊಹ್ಲಿ ಬಳಗ

Update: 2020-11-06 15:44 GMT

ಅಬುಧಾಬಿ: ಐಪಿಎಲ್ 2020 ಆವೃತ್ತಿಯ ಎಲಿಮಿನೇಟರ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಸೆಣಸಾಡುತ್ತಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ ಕೊಹ್ಲಿ ನಾಯಕತ್ವದ ಬೆಂಗಳೂರು ತಂಡವು ಕನಿಷ್ಠ ಮೊತ್ತ ದಾಖಲಿಸಿದ್ದು, ಹೈದರಾಬಾದ್ ಗೆಲುವಿಗೆ 132 ರನ್ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ 131/7 ರನ್ ಗಳಿಸಿತು. ಆರಂಭಿಕನಾಗಿ ಕಣಕ್ಕಿಳಿದ ನಾಯಕ ಕೊಹ್ಲಿ(6) ನಿರಾಶೆ ಮೂಡಿಸಿದರು. ದೇವದತ್ತ ಪಡಿಕ್ಕಲ್ ಕೇವಲ 1 ರನ್ ಗಳಿಸಿದ ಔಟಾದರು. ಈ ವೇಳೆ ತಂಡವನ್ನು ಡಿವಿಲಿಯರ್ಸ್ ಹಾಗೂ ಆರೋನ್ ಫಿಂಚ್ ಆಧರಿಸಿದರು. 

ಫಿಂಚ್ 32 (30 ಎಸೆತ) ರನ್ ಗಳಿಸಿದರೆ, ಡಿವಿಲಿಯರ್ಸ್ 56 ( 43 ಎಸೆತ) ರನ್ ಬಾರಿಸಿ ನಿರ್ಗಮಿಸಿದರು. ಉಳಿದಂತೆ ಮುಹಮ್ಮದ್ ಸಿರಾಜ್ (10) ಮಾತ್ರ ಎರಡಂಕಿ ಸ್ಕೋರ್ ಗಳಿಸಿದರು.

ಸನ್‌ರೈಸರ್ಸ್‌ ಹೈದರಾಬಾದ್ ಪರ ಜೇಸನ್ ಹೋಲ್ಡರ್ 3, ನಟರಾಜನ್ 2, ನದೀಮ್ 1 ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಸೋತ ತಂಡವು ಫೈನಲ್‌ಗೆ ಹೋಗುವ ಅವಕಾಶ ಕಳೆದುಕೊಳ್ಳುತ್ತದೆ. ಗೆದ್ದ ತಂಡ ಎರಡನೇ ಕ್ವಾಲಿಫೈಯರ್ ನಲ್ಲಿ ಆಡಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ವಿರಾಟ್ ಬಳಗವು ಸನ್‌ರೈಸರ್ಸ್ ವಿರುದ್ಧ ಜಯಿಸಿದರೆ ಚೊಚ್ಚಲ ಪ್ರಶಸ್ತಿಯ ಅವಕಾಶವನ್ನು ಜೀವಂತವಾಗಿರಿಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News