ಎಲಿಮಿನೇಟರ್ ನಲ್ಲಿ ಎಡವಿದ ಆರ್‌ಸಿಬಿ: ರೋಚಕ ಹಣಾಹಣಿಯಲ್ಲಿ ಹೈದರಾಬಾದ್ ಜಯಭೇರಿ

Update: 2020-11-07 04:55 GMT

ಅಬುಧಾಬಿ: ಐಪಿಎಲ್ 2020 ಆವೃತ್ತಿಯ ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿದ್ದು, ‌ಹೈದರಾಬಾದ್ ಕ್ವಾಲಿಫೈಯರ್2 ಕ್ಕೆ ಪ್ರವೇಶಿಸಿದರೆ, ಕೊಹ್ಲಿ ನಾಯಕತ್ವದ ಬೆಂಗಳೂರು ಟೂರ್ನಿಯಿಂದ ನಿರ್ಗಮಿಸಿತು.

ಗೆಲುವಿಗೆ 132 ರನ್ ಗುರಿ ಪಡೆದ ಹೈದರಾಬಾದ್ 19.4 ಓವರ್ ಗಳಲ್ಲಿ ಗುರಿ ತಲುಪಿತು. ಕೇನ್ ವಿಲಿಯಮ್ಸನ್ 50( 44 ಎಸೆತ) ಮನೀಶ್ ಪಾಂಡೆ 24 (21 ಎಸೆತ) ಹೋಲ್ಡರ್ 24 ರನ್ ಗಳಿಸಿದರು.

ಸಂಕಷ್ಟದ ಸಂದರ್ಭದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೇನ್‌ ವಿಲಿಯಮ್ಸನ್ ಮತ್ತು ಜೇಸನ್‌ ಹೋಲ್ಡರ್‌ ತಮ್ಮ ತಂಡಕ್ಕೆ 6 ವಿಕೆಟ್‌ ಅಂತರದ ಗೆಲುವು ತಂದುಕೊಟ್ಟರು. ಈ ಜೋಡಿ 5ನೇ ವಿಕೆಟ್‌ ಜೊತೆಯಾಟದಲ್ಲಿ ಅಜೇಯ 65 ರನ್ ಕಲೆಹಾಕಿತು. ಬೆಂಗಳೂರು ಪರ ಸಿರಾಜ್ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ 131/7 ರನ್ ಗಳಿಸಿತು. ಆರಂಭಿಕನಾಗಿ ಕಣಕ್ಕಿಳಿದ ನಾಯಕ ಕೊಹ್ಲಿ(6) ನಿರಾಶೆ ಮೂಡಿಸಿದರು. ದೇವದತ್ತ ಪಡಿಕ್ಕಲ್ ಕೇವಲ 1 ರನ್ ಗಳಿಸಿದ ಔಟಾದರು. ಈ ವೇಳೆ ತಂಡವನ್ನು ಡಿವಿಲಿಯರ್ಸ್ ಹಾಗೂ ಆರೋನ್ ಫಿಂಚ್ ಆಧರಿಸಿದರು. 

ಫಿಂಚ್ 32 (30 ಎಸೆತ) ರನ್ ಗಳಿಸಿದರೆ, ಡಿವಿಲಿಯರ್ಸ್ 56 ( 43 ಎಸೆತ) ರನ್ ಬಾರಿಸಿ ನಿರ್ಗಮಿಸಿದರು. ಉಳಿದಂತೆ ಮುಹಮ್ಮದ್ ಸಿರಾಜ್ (10) ಮಾತ್ರ ಎರಡಂಕಿ ಸ್ಕೋರ್ ಗಳಿಸಿದರು. ಸನ್‌ರೈಸರ್ಸ್‌ ಹೈದರಾಬಾದ್ ಪರ ಜೇಸನ್ ಹೋಲ್ಡರ್ 3, ನಟರಾಜನ್ 2, ನದೀಮ್ 1 ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಸೋಲುವ ಮೂಲಕ ಬೆಂಗಳೂರು ಫೈನಲ್‌ಗೆ ಹೋಗುವ ಅವಕಾಶ ಕಳೆದುಕೊಂಡಿತು. ಸನ್‌ರೈಸರ್ಸ್ ಎರಡನೇ ಕ್ವಾಲಿಫೈಯರ್ ನಲ್ಲಿ ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News