ಕೊನೆಯಲ್ಲಿ ಮುಗ್ಗರಿಸಿದ ಹೈದರಾಬಾದ್: ಮೊದಲ ಬಾರಿ ಫೈನಲ್ ಗೆ ಲಗ್ಗೆ ಇಟ್ಟ ಡೆಲ್ಲಿ ಕ್ಯಾಪಿಟಲ್ಸ್

Update: 2020-11-08 17:58 GMT

ಅಬುಧಾಬಿ: ಐಪಿಎಲ್2020 ಆವೃತ್ತಿಯ ಕ್ವಾಲಿಫೈಯರ್2 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸೋಲೊಪ್ಪಿಕೊಂಡಿದ್ದು, 17 ರನ್ ಗಳಿಂದ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಬಾರಿಗೆ ಫೈನಲ್ ಗೆ ಲಗ್ಗೆ ಇಟ್ಡಿದೆ.

ಗೆಲುವಿಗೆ 190 ರನ್ ಗಳ ಗುರಿ ಪಡೆದ ಹೈದರಾಬಾದ್ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭ ಕಳಪೆಯಾಗಿದ್ದರೂ ಕೂಡಾ ಮಧ್ಯಮ ಕ್ರಮಾಂಕದಲ್ಲಿ ಹೈದರಾಬಾದ್ ಉತ್ತಮವಾಗಿ ಆಡಿತು. ಆದರೆ ಕೊನೆಯಲ್ಲಿ ಮುಗ್ಗರಿಸಿ ಡೆಲ್ಲಿಗೆ ಶರಣಾಯಿತು.

ಹೈದರಾಬಾದ್ ಪರ ವಿಲಿಯಮ್ಸನ್ 67 (45 ಎಸೆತ), ಅಬ್ದುಲ್ ಸಮದ್ 33 (16 ಎಸೆತ) ರನ್ ಗಳಿಸಿದರು. ಡೆಲ್ಲಿ ಪರ ಕಾಗಿಸೋ ರಬಾಡ 4, ಸ್ಟೋನಿಸ್ 3 ವಿಕೆಟ್ ಕಬಳಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 189/3 ರನ್ ಗಳಿಸಿತು. 

ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ಸ್ಟೋನಿಸ್ ಭರ್ಜರಿ ಆರಂಭ ಒದಗಿಸಿದರು. ಮೊದಲ ವಿಕೆಟ್ ಗೆ ಈ ಜೋಡಿ 86 ರನ್ ಗಳ ಜೊತೆಯಾಟ ನಡೆಸಿತು. ಸ್ಟೋನಿಸ್ 38 ರನ್ ಗಳಿಸಿದರೆ, ಶಿಖರ್ ಧವನ್ 78 (50 ಎಸೆತ) ರನ್ ಬಾರಿಸಿದರು.

ಶ್ರೇಯಸ್ ಅಯ್ಯರ್ 21, ಹೆಟ್ಮೈರ್ 41 ರನ್ ಗಳಿಸಿದರು. ಹೈದರಾಬಾದ್ ಪರ ಸಂದೀಪ್ ಶರ್ಮಾ, ಹೋಲ್ಡರ್ ಹಾಗೂ ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈಗಾಗಲೇ ಐಪಿಎಲ್ ಫೈನಲ್ ಪ್ರವೇಶಿಸಿದ್ದು, ಈ ಪಂದ್ಯದ ಗೆಲುವಿನ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ ಅರ್ಹತೆ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News