×
Ad

ಸಚಿನ್ ತೆಂಡುಲ್ಕರ್ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪ್ರವೇಶಕ್ಕೆ 31 ವರ್ಷ

Update: 2020-11-16 00:07 IST

ಹೊಸದಿಲ್ಲಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಇಂದಿಗೆ (ನ.15) 31 ವರ್ಷ ಸಂದಿವೆ.

1989ರ ನವೆಂಬರ್ 15ರಂದು ಕರಾಚಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ ಸಚಿನ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅದೇ ಪಂದ್ಯದಲ್ಲಿ ಪಾಕಿಸ್ತಾನದ ವೇಗಿ ವಕಾರ್ ಯೂನಿಸ್ ಕೂಡ ಪಾದಾರ್ಪಣೆ ಮಾಡಿದ್ದರು. ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತ್ತು. ಈ ಟೆಸ್ಟ್ ಪಂದ್ಯದಲ್ಲಿ ಸಚಿನ್ ಮೊದಲ ಇನಿಂಗ್ಸ್‌ನಲ್ಲಿ ಕೇವಲ 15 ರನ್ ಗಳಿಸಿ ವಕಾರ್ ಯೂನಿಸ್‌ಗೆ ವಿಕೆಟ್ ಒಪ್ಪಿಸಿದ್ದರು. ಬಳಿಕ ಸಚಿನ್ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆಯುತ್ತಾ ‘ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್’ ಎನಿಸಿಕೊಂಡರು. ‘ಮಾಸ್ಟರ್ ಬ್ಲಾಸ್ಟರ್’ ಎಂಬ ಹೆಸರನ್ನು ಗಿಟ್ಟಿಸಿಕೊಂಡರು.

ಸಚಿನ್ ಕ್ರಿಕೆಟ್ ಜಗತ್ತಿನಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಗರಿಷ್ಠ ಅಂತರ್‌ರಾಷ್ಟ್ರೀಯ ಶತಕಗಳನ್ನು ಗಳಿಸಿದ ದಾಖಲೆಯನ್ನೂ ಅವರು ಹೊಂದಿದ್ದಾರೆ.

ಕಳೆದ ವರ್ಷ ಸಚಿನ್ ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾಗಿದ್ದರು. ಈ ಗೌರವಕ್ಕೆ ಪಾತ್ರರಾದ ಭಾರತದ ಆರನೇ ಆಟಗಾರ ಎನಿಸಿಕೊಂಡಿದ್ದರು. 46ರ ಹರೆಯದ ಸಚಿನ್ 16ನೇ ವಯಸ್ಸಿನಲ್ಲಿ ಭಾರತ ತಂಡದ ಪರ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ತಕ್ಷಣವೇ ದೇಶದ ನೆಚ್ಚಿನ ಕ್ರಿಕೆಟಿಗ ಎನಿಸಿಕೊಂಡರು. ಎಲ್ಲ ಸ್ವರೂಪದ ಕ್ರಿಕೆಟ್‌ನಲ್ಲಿ 34,357 ರನ್ ಗಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ‘ಮಾಸ್ಟರ್ ಬ್ಲಾಸ್ಟರ್’ ಸಚಿನ್ ತೆಂಡುಲ್ಕರ್ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News