×
Ad

ಟೆಸ್ಟ್ ಪಂದ್ಯಗಳಿಗೂ ಟೀಮ್ ಇಂಡಿಯಾದ ತಯಾರಿ

Update: 2020-11-17 23:14 IST

ಸಿಡ್ನಿ, ನ.17: ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯ ಬಳಿಕ ಆಸ್ಟ್ರೇಲಿಯದಲ್ಲಿ ಟೀಮ್ ಇಂಡಿಯಾಕ್ಕೆ ಟೆಸ್ಟ್ ಸರಣಿ ಇದೆ. ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡದ ಆಟಗಾರರು ಮುಂದಿನ ತಿಂಗಳು ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಪಂದ್ಯಗಳ ತಯಾರಿ ಕಡೆಗೂ ಗಮನ ಹರಿಸಿದ್ದಾರೆ.

ಮಂಗಳವಾರ ನಡೆದ ಅಭ್ಯಾಸದಲ್ಲಿ ಎಲ್ಲಾ ಮೂರು ತಂಡಗಳ ಉನ್ನತ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಭಾಗವಹಿಸಿದ್ದರು.

ಹಿರಿಯ ವೇಗಿ ಮುಹಮ್ಮದ್ ಶಮಿ ಮತ್ತು ಯುವ ವೇಗಿ ಮುಹಮ್ಮದ್ ಸಿರಾಜ್ ತನ್ನ ನೆಟ್ ಅಭ್ಯಾಸದಲ್ಲಿ ತೊಡಗಿರುವ ಚಿತ್ರವನ್ನು ನಾಯಕ ಕೊಹ್ಲಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘‘ಲವ್ ಟೆಸ್ಟ್ ಕ್ರಿಕೆಟ್ ಸೆಷನ್ಸ್’’ ಎಂದು ಕೊಹ್ಲಿಯ ಟ್ವೀಟ್ ಮಾಡಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ಭಾರತಕ್ಕೆ ಹಿಂದಿರುಗುವ ಮೊದಲು ಆಡಿಲೇಡ್‌ನಲ್ಲಿ ಡಿಸೆಂಬರ್ 17ರಿಂದ ಪ್ರಾರಂಭವಾಗುವ ಆರಂಭಿಕ ಡೇ-ನೈಟ್ ಟೆಸ್ಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಆಟಗಾರರು ಐಪಿಎಲ್ ಕಾರ್ಯನಿರತವಾಗಿದ್ದರಿಂದಾಗಿ ಟೆಸ್ಟ್ ಕ್ರಿಕೆಟಿಗರು ಮತ್ತೆ ಹೊಂದಿಕೊಳ್ಳಬೇಕಾಗಿದೆ. ಓಪನರ್ ಕೆ.ಎಲ್.ರಾಹುಲ್ ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. ಅವರು ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ನಡೆಸಿದ್ದಾರೆ.

ಶಮಿ ಮತ್ತು ಸಿರಾಜ್ ಜೊತೆಗೂಡಿ ಬೌಲಿಂಗ್ ಮಾಡುತ್ತಿರುವ ವೀಡಿಯೊವನ್ನು ಬಿಸಿಸಿಐ ಪೋಸ್ಟ್ ಮಾಡಿದೆ.

ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ 14 ಪಂದ್ಯಗಳಿಂದ 20 ವಿಕೆಟ್ ಪಡೆದ 30ರ ಹರೆಯದ ಶಮಿ ಟೆಸ್ಟ್, ಏಕದಿನ ಮತ್ತು ಟ್ವೆಂಟಿ-20 ಕ್ರಿಕೆಟ್ ಸರಣಿಯಲ್ಲಿ ಆಡಲಿದ್ದಾರೆ.

ಆಡಿಲೇಡ್‌ನಲ್ಲಿ ಹಗಲು-ರಾತ್ರಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದೊಂದಿಗೆ ಆರಂಭವಾಗುವ ನಾಲ್ಕು ಟೆಸ್ಟ್ ಸರಣಿಯಲ್ಲಿ ಭಾರತದ ಕ್ರಿಕೆಟ್ ತಂಡವು ಶಮಿ ಅವರನ್ನು ಹೆಚ್ಚು ಅವಲಂಬಿಸಿದೆ.

ಟೆಸ್ಟ್ ತಂಡದಲ್ಲಿ ಮಾತ್ರ ಇರುವ ಸಿರಾಜ್ ತನ್ನ ಹಿರಿಯ ತಂಡದ ಆಟಗಾರನನ್ನು ಅನುಸರಿಸಿದರು.

26 ರ ಹರೆಯದ ಸಿರಾಜ್ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಒಂಭತ್ತು ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ.

ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳು ನವೆಂಬರ್ 27 ಮತ್ತು 29 ರಂದು ಎಸ್‌ಸಿಜಿಯಲ್ಲಿ ನಡೆಯಲಿದ್ದು, ನಂತರ ಡಿಸೆಂಬರ್ 2ರಂದು ಕ್ಯಾನ್‌ಬೆರಾದಲ್ಲಿ ಮೂರನೇ ಪಂದ್ಯ ನಡೆಯಲಿದೆ.

ಮೊದಲ ಟ್ವೆಂಟಿ-20 ಪಂದ್ಯ (ಡಿಸೆಂಬರ್ 4) ಕ್ಯಾನ್‌ಬೆರಾದಲ್ಲಿ ನಡೆಯಲಿದ್ದು, ಕೊನೆಯ 2 ಪಂದ್ಯಗಳು ಎಸ್‌ಸಿಜಿಯಲ್ಲಿ ಡಿಸೆಂಬರ್ 6 ಮತ್ತು 8 ರಂದು ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News