2021ರಲ್ಲಿ ಭಾರತ-ಇಂಗ್ಲೆಂಡ್ 5 ಟೆಸ್ಟ್ ಗಳ ಸರಣಿಗೆ ಇಸಿಬಿ ಆತಿಥ್ಯ

Update: 2020-11-18 18:38 GMT

ಲಂಡನ್: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ 2021ರಲ್ಲಿ ಐದು ಟೆಸ್ಟ್‌ಗಳ ಸರಣಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಆತಿಥ್ಯ ವಹಿಸಲಿದೆ.

  2021ರ ಸರಣಿಯ ತಾತ್ಕಾಲಿಕ ತವರು ಸರಣಿಯ ವೇಳಾಪಟ್ಟಿಯನ್ನು ಇಸಿಬಿ ಬುಧವಾರ ಪ್ರಕಟಿಸಿದೆ. ಆಗಸ್ಟ್ 4ರಿಂದ 8ರ ತನಕ ಟ್ರೆಂಟ್‌ಬ್ರಿಡ್ಜ್‌ನಲ್ಲಿ ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯ ನಿಗದಿಯಾಗಿದೆ. ಅಂತಿಮ ಟೆಸ್ಟ್ ಸೆಪ್ಟಂಬರ್ 10ರಿಂದ ಸೆ. 14ರವರೆಗೆ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ.

 ಭಾರತದ ವಿರುದ್ಧ ಟೆಸ್ಟ್ ಸರಣಿಯ ಮೊದಲು ಜೂನ್ ಮತ್ತು ಜುಲೈನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ತಂಡಗಳ ಸೀಮಿತ ಓವರ್‌ಗಳ ಪ್ರವಾಸ ಸರಣಿ ನಡೆಯಲಿದೆ. ಈ ವರ್ಷ ಕೋವಿಡ್-19 ವಿರಾಮದ ನಂತರ ಬೇರೆ ದೇಶಗಳ ತಂಡಗಳನ್ನು ಆಹ್ವಾನಿಸಿದ ಮೊದಲ ತಂಡ ಇಂಗ್ಲೆಂಡ್. ಅಭಿಮಾನಿಗಳ ಅನುಪಸ್ಥಿತಿಯಲ್ಲಿ ಜೈವಿಕ ಸುರಕ್ಷಿತ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸಲಾಗುತ್ತಿದ್ದು, ಜನವರಿಯಲ್ಲಿ ಪ್ರೇಕ್ಷಕರು ಟೆಕೆಟ್ ಪಡೆದು ಕ್ರೀಡಾಂಗಣಗಳಿಗೆ ಮರಳಬೇಕೆಂದು ಇಸಿಬಿ ಆಶಿಸಿದೆ.

  ‘‘ಮುಂದಿನ ವರ್ಷ ನಾವು ಮತ್ತೊಂದು ದೊಡ್ಡ ಅಂತರ್‌ರಾಷ್ಟ್ರೀಯ ಸರಣಿಯನ್ನು ಎದುರು ನೋಡುತ್ತಿದ್ದೇವೆ. ಭಾರತದ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ ಆಡಲಿದೆ’’ಎಂದು ಇಸಿಬಿ ಸಿಇಒ ಟಾಮ್ ಹ್ಯಾರಿಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  ‘‘ಕೋವಿಡ್-19 ಕಾರಣದಿಂದಾಗಿ ಇನ್ನೂ ಹೆಚ್ಚಿನ ಅನಿಶ್ಚಿತತೆ ಇದೆ. ಹೀಗಿದ್ದರೂ ಮುಂದಿನ ವರ್ಷ ಎಲ್ಲಾ ಅಡೆತಡೆಗಳು ದೂರವಾಗಿ ದೇಶಾದ್ಯಂತ ಅಭಿಮಾನಿಗಳಿಗೆ ಸುರಕ್ಷಿತವಾಗಿ ಕ್ರೀಡಾಂಗಣಕ್ಕೆ ಬರಲು ಸಾಧ್ಯವಾಗುತ್ತದೆಂದು ನಾವು ಭಾವಿಸುತ್ತೇವೆ’’ ಎಂದು ಅವರು ಹೇಳಿದ್ದಾರೆ. ಆಗಸ್ಟ್‌ನಲ್ಲಿ ಸೀಮಿತ ಓವರ್‌ಗಳ ಸರಣಿಯಲ್ಲಿ ಅಂಧರ ತಂಡವು ಆಸ್ಟ್ರೇಲಿಯ ವಿರುದ್ಧ ಸೆಣಸಿದರೆ, ಇಂಗ್ಲೆಂಡ್ ಮಹಿಳಾ ತಂಡವು ದಕ್ಷಿಣ ಆಫ್ರಿಕಾ ಮತ್ತು ನ್ಯೂಝಿಲ್ಯಾಂಡ್ ತಂಡಗಳ ವಿರುದ್ಧ ಸರಣಿಯ ಆತಿಥ್ಯ ವಹಿಸಲು ಯೋಜನೆ ಹಾಕಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News