ಭಾರತದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ತಂದೆ ನಿಧನ

Update: 2020-11-20 13:45 GMT
ಫೈಲ್ ಚಿತ್ರ

ಹೈದರಾಬಾದ್, ನ.20: ಭಾರತೀಯ ಕ್ರಿಕೆಟ್ ತಂಡದೊಂದಿಗೆ ಆಸ್ಟ್ರೇಲಿಯದಲ್ಲಿರುವ ಭಾರತದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಅವರ ತಂದೆ ಮುಹಮ್ಮದ್ ಗೌಸ್(53) ಹೈದರಾಬಾದ್‌ನಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿ ನಿಧನರಾಗಿದ್ದಾರೆ.

26ರ ಹರೆಯದ ಸಿರಾಜ್ ಸಿಡ್ನಿಯಲ್ಲಿ ರಾಷ್ಟ್ರೀಯ ತಂಡದೊಂದಿಗೆ ಅಭ್ಯಾಸ ನಡೆಸಿ ತಮ್ಮ ಕೊಠಡಿಗೆ ವಾಪಸಾದಾಗ ತಂದೆಯ ನಿಧನದ ಸುದ್ದಿ ಗೊತ್ತಾಗಿದೆ.

 ‘‘ನನ್ನ ದೇಶವನ್ನು ನೀನು ಹೆಮ್ಮೆ ಪಡುವಂತೆ ಮಾಡು ಎಂದು ತಂದೆ ನನಗೆ ಯಾವಾಗಲೂ ಹೇಳುತ್ತಿದ್ದರು. ಖಂಡಿತವಾಗಿಯೂ ತಂದೆಯ ಆಸೆ ಈಡೇರಿಸುವೆ. ನನ್ನ ತಂದೆ ಆಟೋ ರಿಕ್ಷಾವನ್ನು ಚಲಾಯಿಸುತ್ತಾ ಕ್ರಿಕೆಟ್ ಮೇಲಿನ ನನ್ನ ಉತ್ಸಾಹವನ್ನು ಮುಂದುವರಿಸಲು ಎಷ್ಟೊಂದು ಕಷ್ಟಪಟ್ಟಿದ್ದರು ಎಂದು ನನಗೆ ಚೆನ್ನಾಗಿ ಗೊತ್ತಿದೆ. ತಂದೆಯ ನಿಧನದ ಸುದ್ದಿ ಕೇಳಿ ಆಘಾತವಾಯಿತು. ನನ್ನ ಜೀವನದ ದೊಡ್ಡ ಬೆಂಬಲಿಗನನ್ನು ಕಳೆದುಕೊಂಡಿದ್ದೇನೆ. ಅವರು ನಾನು ದೇಶದ ಪರ ಆಡುವುದನ್ನು ನೋಡುವ ಕನಸು ಕಂಡಿದ್ದರು. ನನ್ನ ಕೋಚ್ ರವಿ ಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರು ನನ್ನ ತಂದೆಯ ನಿಧನದ ಸುದ್ದಿ ತಿಳಿಸಿದರು’’ ಎಂದು ಸಿರಾಜ್ ಹೇಳಿದ್ದಾರೆ.

 2016-17ರ ಋತುವಿನಲ್ಲಿ ರಣಜಿ ಟ್ರೋಫಿಯಲ್ಲಿ 41 ವಿಕೆಟ್‌ಗಳನ್ನು ಕಬಳಿಸಿದ್ದ ಸಿರಾಜ್ 2.6 ಕೋ.ರೂ.ಗೆ ಐಪಿಎಲ್‌ನ ಸನ್ ರೈಸರ್ಸ್ ಹೈದರಾಬಾದ್ ತಂಡದ ತೆಕ್ಕೆಗೆ ಸೇರಿದ್ದರು.

ಆಸ್ಟ್ರೇಲಿಯದಲ್ಲಿ ಕ್ವಾರಂಟೈನ್ ನಿಯಮ ಜಾರಿಯಲ್ಲಿರುವ ಕಾರಣ ಸಿರಾಜ್‌ಗೆ ತನ್ನ ತಂದೆಯ ಅಂತಿಮ ಕ್ರಿಯೆಗಾಗಿ ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News