ಹಾಕಿ ಚಾಂಪಿಯನ್ ಎಂ.ಪಿ.ಸಿಂಗ್‌ಗೆ ಸುನೀಲ್ ಗವಾಸ್ಕರ್ ಸಹಾಯ ಹಸ್ತ

Update: 2020-11-20 14:07 GMT

ಹೊಸದಿಲ್ಲಿ, ನ.20: ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಸಾಕಷ್ಟು ಕ್ರೀಡಾ ಪಟುಗಳಿಗೆ ಕಳೆದ 20ಕ್ಕೂ ಅಧಿಕ ವರ್ಷಗಳಿಂದ ಸಹಾಯಹಸ್ತ ನೀಡುತ್ತಿರುವ ಕ್ರಿಕೆಟ್ ದಂತಕತೆ ಸುನೀಲ್ ಗವಾಸ್ಕರ್ ಅವರ ‘ದಿ ಚಾಂಪ್ಸ್ ಫೌಂಡೇಶನ್’ ಹಾಕಿ ಚಾಂಪಿಯನ್ ಮಹಿಂದರ್‌ಪಾಲ್ ಸಿಂಗ್ ಅವರ ಸಹಾಯಕ್ಕೆ ಮುಂದಾಗಿದೆ.

 ಎಂ.ಪಿ. ಸಿಂಗ್ ಎಂದೇ ಖ್ಯಾತರಾಗಿರುವ ಮಹಿಂದರ್ ಪಾಲ್ ಸಿಂಗ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, 58ರ ವಯಸ್ಸಿನ ಸಿಂಗ್ ಕಿಡ್ನಿ ಕಸಿಗಾಗಿ ದಾನಿಗಳ ನಿರೀಕ್ಷೆಯಲ್ಲಿದ್ದಾರೆ.

‘‘ನಮ್ಮ ಮಾಜಿ ಚಾಂಪಿಯನ್‌ಗಳು ಹಾಗೂ ಅಂತರ್‌ರಾಷ್ಟ್ರೀಯ ಪದಕ ವಿಜೇತರು ಕಷ್ಟದ ಸಮಯ ಎದುರಿಸುತ್ತಿದ್ದಾರೆನ್ನುವುದನ್ನು ಮಾಧ್ಯಮದಲ್ಲಿ ಓದಿ ತಿಳಿದುಕೊಂಡೆ. ಎಂಪಿ ಸಿಂಗ್ ಅವರ ಆರೋಗ್ಯದ ಕುರಿತ ಮಾಹಿತಿ ನೀಡಿದ ಮುದ್ರಣ ಮಾಧ್ಯಮಕ್ಕೆ ಧನ್ಯವಾದಗಳು’’ ಎಂದು ಗವಾಸ್ಕರ್ ಹೇಳಿದ್ದಾರೆ.

1988ರ ಸಿಯೋಲ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಭಾರತೀಯ ಹಾಕಿ ತಂಡದ ಅವಿಭಾಜ್ಯ ಅಂಗವಾಗಿದ್ದ ಎಂಪಿ ಸಿಂಗ್ ಅವರು ಮುಹಮ್ಮದ್ ಶಾಹಿದ್, ಎಂಎಂ ಸೋಮಯ, ಜ್ಯೂಡ್ ಫೆಲಿಕ್ಸ್, ಪರ್ಗತ್ ಸಿಂಗ್ ಅವರ ಜೊತೆಗೆ ಅಡಿದ್ದರು.

‘‘ಶಿಕ್ಷಣ, ಆರೋಗ್ಯ, ಮಕ್ಕಳು ಹಾಗೂ ಹಿರಿಯ ನಾಗರಿಕರಿಗಾಗಿ ಸಾಕಷ್ಟು ಪ್ರತಿಷ್ಠಾನಗಳಿವೆ.ಆದರೆ, ಅಂತರ್‌ರಾಷ್ಟ್ರೀಯ ಕ್ರೀಡಾಪಟುಗಳಿಗೆ ಯಾವುದೇ ಫೌಂಡೇಶನ್‌ಗಳಿಲ್ಲ. ಹೀಗಾಗಿ ನಾನು ಸ್ವಂತ ವೆಚ್ಚದಲ್ಲಿ ಫೌಂಡೇಶನ್ ಸ್ಥಾಪಿಸಿದೆ. ನಾವು ಇನ್ನಷ್ಟು ನೆರವು ನೀಡಲು ಬಯಸಿದ್ದು, ಮಾಧ್ಯಮಗಳ ಮೂಲಕವೇ ನಮಗೆ ಅಂತರ್‌ರಾಷ್ಟ್ರೀಯ ಆಟಗಾರರ ದುಸ್ಥಿತಿ ಗಮನಕ್ಕೆ ಬರುತ್ತಿದೆ’’ ಎಂದು ಗವಾಸ್ಕರ್ ತಿಳಿಸಿದರು.

 ಇಲ್ಲಿಯವರೆಗೆ ‘ದಿ ಚಾಂಪ್ಸ್ ಫೌಂಡೇಶನ್’ 21 ಮಾಜಿ ಅಟಗಾರರಿಗೆ ಮಾಸಿಕ ಸಹಾಯ ಹಾಗೂ ಅವರ ವೈದ್ಯಕೀಯ ವೆಚ್ಚವನ್ನು ನೋಡಿಕೊಳ್ಳುವ ಮೂಲಕ ಸಹಾಯಹಸ್ತ ಚಾಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News