ಬ್ರೆಝಿಲ್: ಮಾಲ್‌ನಲ್ಲಿ ಕಪ್ಪು ಜನಾಂಗೀಯನ ಥಳಿಸಿ ಹತ್ಯೆ

Update: 2020-11-21 16:28 GMT

ಬ್ರೆಝಿಲ್,ನ.21: ಸೂಪರ್‌ಮಾರ್ಕೆಟ್ ಒಂದರಲ್ಲಿ ಕಪ್ಪುಜನಾಂಗೀಯನೊಬ್ಬನನ್ನು ಭದ್ರತಾ ಸಿಬ್ಬಂದಿ ಥಳಿಸಿ ಕೊಂದ ಘಟನೆಯ ಬಳಿಕ ಬ್ರೆಝಿಲ್‌ನಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದು, ಶುಕ್ರವಾರ ‘ ಕಪ್ಪು ಆತ್ಮಸಾಕ್ಷಿ ದಿನ’ವಾಗಿ ಆಚರಿಸಲಾಯಿತು.

  ಗುರುವಾರ ರಾತ್ರಿ ದಕ್ಷಿಣ ಬ್ರೆಝಿಲ್‌ನ ನಗರ ಪೊರೋ ಆಲೆಗ್ರೆಯಲ್ಲಿ ಈ ಘಟನೆ ನಡೆದಿದ್ದು, ಕಪ್ಪುಜನಾಂಗೀಯನನ್ನು ಭದ್ರತಾ ಸಿಬ್ಬಂದಿ ಥಳಿಸಿ ಹತ್ಯೆಗೈದಿರುವುದನ್ನು ಪ್ರತ್ಯಕ್ಷದರ್ಶಿಯೊಬ್ಬ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಬ್ರೆಝಿಲ್‌ ಮಾಧ್ಯಮಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.

   ಕಪ್ಪು ಜನಾಂಗೀಯ ವ್ಯಕ್ತಿಯ ಹತ್ಯೆಯನ್ನು ಖಂಡಿಸಿ, ಸಾವೊ ಪೌಲೋ ನಗರದಲ್ಲಿ ಸುಮಾರು 1 ಸಾವಿರ ಮಂದಿ ಪ್ರತಿಭಟನಾ ರ್ಯಾಲಿ ನಡೆಸಿದರು. ಪ್ರತಿಭಟನಾಕಾರರು ಘಟನೆ ನಡೆದ ಫ್ರೆಂಚ್ ಮಾಲಕತ್ವದ ಸೂಪರ್‌ಮಾರ್ಕೆಟ್ ಕ್ಯಾರೆಫೋರ್‌ನ ಸಾವೋಪೌಲೊ ಶಾಖೆಯಲ್ಲಿ ಜಮಾಯಿಸಿದರು. ಉದ್ರಿಕ್ತ ಗುಂಪು ಮಳಿಗೆಗೆ ನುಗ್ಗಿ ವಸ್ತುಗಳಿಗೆ ಬೆಂಕಿ ಹಚ್ಚಿದ್ದಾರೆ ಹಾಗೂ ಜಖಂಗೊಳಿಸಿದ್ದಾರೆಂದು ವರದಿಗಳು ತಿಳಿಸಿವೆ.

ಕ್ಯಾರ್‌ಫೋರ್ ಸಂಸ್ಥೆಯ ಕೈಗಳು ಕಪ್ಪು ರಕ್ತದಿಂದ ಮಲಿನವಾಗಿವೆ ಎಂಬ ಭಿತ್ತಿಪತ್ರಗಳನ್ನು ಪ್ರತಿಭಟನಾಕಾರರು ಹಿಡಿದಿದ್ದರು.

ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದ್ದಾರೆ ಹಾಗೂ ಗ್ರೆನೇಡ್‌ಗಳನ್ನು ಎಸೆದಿದ್ದಾರೆಂದು ಟಿವಿ ಮಾಧ್ಯಮಗಳು ವರದಿ ಮಾಡಿವೆ.

ಕಪ್ಪು ಜನಾಂಗೀಯನ ಹತ್ಯೆ ವಿರೋಧಿಸಿ ರಾಜಧಾನಿ ಬ್ರೆಸಿಲಿಯಾ, ಬೆಲೋ ಹಾರಿರೊಂಟೆ ಹಾಗೂ ರಿಯೋ ಡಿ ಜನೈರೋ ನಗರಗಳಲ್ಲಿಯೂ ಪ್ರತಿಭಟನೆಗಳು ಭುಗಿಲೆದ್ದಿವೆ.

 ಭದ್ರತಾ ಸಿಬ್ಬಂದಿಯ ಥಳಿತದಿಂದ ಸಾವನ್ನಪ್ಪಿದ ಕಪ್ಪು ಜನಾಂಗೀಯನನ್ನು ಸಿಲವೆರಿಯಾ ಫ್ರೆಯಿಟಾಸ್ ಎಂದು ಗುರುತಿಸಲಾಗಿದೆ. ಸೂಪರ್ ಮಾರ್ಕೆಟ್‌ನ ಮಹಿಳಾ ಉದ್ಯೋಗಿಯೊಬ್ಬರಿಗೆ ಬೆದರಿಕೆಯೊಡ್ಡಿದ್ದರಿಂದ ಆಕೆ ರಕ್ಷಣೆಗಾಗಿ ಭದ್ರತಾ ಸಿಬ್ಬಂದಿಯನ್ನು ಕರೆಯಿಸಿದ್ದಳು. ಅಲ್ಲಿಗೆ ಧಾವಿಸಿದ ಭದ್ರತಾ ಸಿಬ್ಬಂದಿ ಸಿಲ್ವೇರಾನನಗೆ ಮಾರಾಣಾಂತಿಕವಾಗಿ ಥಳಿಸಿದ್ದರಿಂದ ಅತ ಸ್ಥಳದಲ್ಲೇ ಸಾವನ್ನಪ್ಪಿದನೆಂದು ವರದಿಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News