ಹಾಫಿಝ್ ಸಯೀದ್‌ನ ಇನ್ನಿಬ್ಬರು ಸಹಚರರಿಗೆ ಜೈಲು ಶಿಕ್ಷೆ ಘೋಷಣೆ

Update: 2020-11-21 16:34 GMT

 ಲಾಹೋರ್,ನ.21: ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಭಯೋತ್ಪಾದಕ ದಾಳಿಯ ಶಂಕಿತ ಸೂತ್ರಧಾರಿ ಹಾಗೂ ಜಮಾತುದಅವಾ ಗುಂಪಿನ ವರಿಷ್ಠ ಹಾಫಿಝ್ ಸಯೀದ್‌ನ ಇನ್ನೂ ಇಬ್ಬರು ಸಹಾಯಕರನ್ನು ಪಾಕಿಸ್ತಾನಿ ನ್ಯಾಯಾಲಯವು ಶುಕ್ರವಾರ ಜೈಲು ಶಿಕ್ಷೆ ವಿಧಿಸಿದೆ.

 ಪ್ರಕರಣದ ವಿಚಾರಣೆ ನಡೆಸಿದ ಲಾಹೋರ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ಎಟಿಸಿ)ವು ಜೆಯುಡಿ ಕಾರ್ಯಕರ್ತರಾದ ಮುಹಮ್ಮದ್ ಅಶ್ರಫ್ ಹಾಗೂ ಲುಖ್ಮಾನ್ ಶಾ ಅವರಿಗೆ ಕ್ರಮವಾಗಿ ಆರು ಹಾಗೂ ಐದೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಎಟಿಸಿ ನ್ಯಾಯಾಧೀಶ ಅರ್ಶದ್ ಹುಸೈನ್ ಭುಟ್ಟಾ ಕೂಡಾ ತಲಾ 10 ಸಾವಿರ ರೂ.ಗಳ ದಂಡ ವಿಧಿಸಿದ್ದಾರೆ. ಗುರುವಾರದಂದು ಎಟಿಸಿ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಜೆಯುಡಿ ವರಿಷ್ಠ 70 ವರ್ಷ ವಯಸ್ಸಿನ ಹಾಫಿಝ್ ಸಯೀದ್‌ಗೆ 10 ವರ್ಷಗಳ ಜೈಲು ಶಿಕ್ಷೆ ಘೋಷಿಸಿತು.

ಸಯೀದ್ ಜೊತೆಗೆ ಅವರ ಇಬ್ಬರು ನಿಕಟವರ್ತಿಗಳಾದ ಝಫರ್ ಇಕ್ಬಾಲ್ ಹಾಗೂ ಯಾಹ್ಯಾ ಮುಜಾಹಿದ್ ಅವರಿಗೆ ಹತ್ತೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದೇ ಪ್ರಕರಣದಲ್ಲಿ ಹಾಫಿಝ್‌ನ ಭಾವ ಅಬ್ದುಲ್ ರಹ್ಮಾನ್ ಮಕ್ಕಿಗೆ ಆರು ತಿಂಗಳ ಜೈಲು ವಾಸ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News