ಕಠಿಣ ಪರಿಸ್ಥಿತಿ ನಮ್ಮನ್ನು ಬಲಿಷ್ಠಗೊಳಿಸುತ್ತದೆ

Update: 2020-11-23 17:36 GMT

ಸಿಡ್ನಿ, ನ.23: ಕಠಿಣ ಪರಿಸ್ಥಿತಿ ನಮ್ಮನ್ನು ಬಲಪಡಿಸುತ್ತದೆಂದು ನಾಯಕ ವಿರಾಟ್ ಕೊಹ್ಲಿ ಹೇಳಿದ ಕಿವಿಮಾತು ಆಸ್ಟ್ರೇಲಿಯದಿಂದ ವಾಪಸಾಗದಿರುವ ನಿರ್ಧಾರಕ್ಕೆ ಪ್ರೇರಣೆ ನೀಡಿತು ಎಂದು ತಂದೆಯ ಅಗಲಿಕೆಯ ಆಘಾತದಲ್ಲೂ ಸ್ವದೇಶಕ್ಕೆ ವಾಪಸಾಗದೆ ಉಳಿದಿರುವ ಭಾರತದ ಯುವ ವೇಗಿ ಮುಹಮ್ಮದ್ ಸಿರಾಜ್ ಹೇಳಿದ್ದಾರೆ.

ಟೀಮ್ ಇಂಡಿಯಾದ ನಾಯಕ ಕೊಹ್ಲಿ ಹಿಂದೆ ಅದೇ ಪರಿಸ್ಥಿತಿ ಎದುರಿಸಿದ್ದರು. 2007ರಲ್ಲಿ ರಣಜಿ ಟ್ರೋಫಿ ಪಂದ್ಯ ಆಡುತ್ತಿದ್ದಾಗ ಕೊಹ್ಲಿ ತಂದೆ ನಿಧನರಾದರು. ಆದರೆ ತನ್ನ ತಂದೆಯನ್ನು ಕಳೆದುಕೊಂಡ ಮರುದಿನ ಡೆಲ್ಲಿ ತಂಡದ ಪರ ಆಡಿದ್ದರು. ಕೊಹ್ಲಿ 97 ರನ್ ಗಳಿಸಿದ್ದರು.

ಸಿರಾಜ್ ತಂದೆ ಮುಹಮ್ಮದ್ ಗೌಸ್ (53) ಶ್ವಾಸಕೋಶದ ಕಾಯಿಲೆಯಿಂದ ಕಳೆದ ವಾರ ಹೈದರಾಬಾದ್‌ನಲ್ಲಿ ನಿಧನರಾದರು. ಆಗ ಬಿಸಿಸಿಐ ಸಿರಾಜ್‌ಗೆ ಸ್ವದೇಶಕ್ಕೆ ಮರಳುವ ಆಯ್ಕೆಯನ್ನು ನೀಡಿದ್ದರೂ, ವೇಗದ ಬೌಲರ್ ರಾಷ್ಟ್ರೀಯ ಕರ್ತವ್ಯದಲ್ಲಿರಲು ನಿರ್ಧರಿಸಿದರು.

  ‘‘ಉದ್ವಿಗ್ನತೆ ಬೇಡ ಮತ್ತು ದೃಢವಾಗಿರಿ. ನಿಮ್ಮ ತಂದೆ ನೀವು ಭಾರತಕ್ಕಾಗಿ ಆಡಬೇಕೆಂದು ಬಯಸಿದ್ದರು. ಆದ್ದರಿಂದ, ಅದನ್ನು ಮಾಡಿ ಮತ್ತು ಒತ್ತಡಕ್ಕೊಳಗಾಗಬೇಡಿ’’ ಎಂದು ನನಗೆ ಕೊಹ್ಲಿ ಹೇಳಿರುವುದಾಗಿ ಸಿರಾಜ್ ತಿಳಿಸಿದರು.

 ಸಿರಾಜ್ ಅವರ ತಂದೆ ಆಟೊ ರಿಕ್ಷಾವನ್ನು ಓಡಿಸುತ್ತಿದ್ದರು. ಅವರು ಮಗನನ್ನು ಕ್ರಿಕೆಟಿಗನಾಗಿ ರೂಪಿಸುವಲ್ಲಿ ಕಷ್ಟ ಅನುಭವಿಸಿದ್ದರು.

  ‘‘ಅವರು ನನ್ನ ಜೀವನವನ್ನು ರೂಪಿಸಿದವರು. ಇದು ನನಗೆ ದೊಡ್ಡ ನಷ್ಟವಾಗಿದೆ. ದೇಶಕ್ಕಾಗಿ ನಾನು ಬೆಳಗಬೇಕೆಂದು ಅವರು ಬಯಸಿದ್ದರು ಮತ್ತು ಅವರ ಕನಸುಗಳನ್ನು ಈಡೇರಿಸುವುದು ನನ್ನ ಕರ್ತವ್ಯವಾಗಿದೆ ’’ ಎಂದು ಸಿರಾಜ್ ಹೇಳಿದರು.

‘‘ಈ ಕಠಿಣ ಕಾಲದಲ್ಲಿ ನನ್ನ ತಂಡದ ಸದಸ್ಯರು ನನ್ನೊಂದಿಗೆ ನಿಂತಿದ್ದರಿಂದ ನಾನು ಅವರಿಗೆ ಋಣಿಯಾಗಿದ್ದೇನೆ ’’ ಎಂದು ಅವರು ಹೇಳಿದರು.

ತಂದೆ ನಿಧನದ ಕಾರಣದಿಂದಾಗಿ ಸಿರಾಜ್ ಆಸ್ಟ್ರೇಲಿಯ ದಿಂದ ಮರಳದಿರಲು ನಿರ್ಧರಿಸಿದರು. ಅವರ ನಿರ್ಧಾರ ವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಶ್ಲಾಘಿಸಿದರು. ನವೆಂಬರ್ 27ರಿಂದ ಪ್ರಾರಂಭವಾಗುವ ಸರಣಿಯನ್ನು ತಪ್ಪಿಸಿಕೊಳ್ಳದಂತೆ ತಾಯಿ ಕೂಡ ಸಲಹೆ ನೀಡಿದ್ದಾರೆ ಎಂದು ಸಿರಾಜ್ ಹೇಳಿದರು.

 ‘‘ಎಲ್ಲರೂ ಒಂದು ದಿನ ಹೋಗಬೇಕು ಎಂದು ಅಮ್ಮ ಹೇಳಿದರು. ಇಂದು ಅದು ನಿನ್ನ ತಂದೆ, ನಾಳೆ ಅದು ನಾನೇ ಆಗಬಹುದು. ನಿನ್ನ ತಂದೆ ನಿನ್ನಿಂದ ಬಯಸಿದ್ದನ್ನು ಮಾಡು. ಭಾರತದ ಪರ ಚೆನ್ನಾಗಿ ಆಡು ’’ ಎಂದು ತಾಯಿ ಸಲಹೆ ನೀಡಿರುವುದಾಗಿ ಸಿರಾಜ್ ತಿಳಿಸಿದರು.

 ‘‘ಬಹುಶಃ ನನ್ನ ತಂದೆ ದೈಹಿಕವಾಗಿ ಇಲ್ಲದಿರಬಹುದು. ಆದರೆ ಅವರು ಯಾವಾಗಲೂ ನನ್ನೊಂದಿಗೆ ಇರುತ್ತಾರೆಂದು ನಾನು ಭಾವಿಸುತ್ತೇನೆ ’’ಎಂದು ಸಿರಾಜ್ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News