ಬಾಂಗ್ಲಾ ಪ್ರವಾಸ: 2 ಟೆಸ್ಟ್ ಆಡಲು ವಿಂಡೀಸ್ ಒಲವು

Update: 2020-11-23 17:49 GMT

ಢಾಕಾ, ನ.23: ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯ ವಾತಾವರಣದಲ್ಲಿ ಕಂಡು ಬಂದಿರುವ ‘ಒತ್ತಡ’ವನ್ನು ಉಲ್ಲೇಖಿಸಿ ಮುಂದಿನ ವರ್ಷದ ಆರಂಭದಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಮೂರರಿಂದ ಎರಡು ಪಂದ್ಯಗಳಿಗೆ ಇಳಿಸಬಹುದು ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಸೂಚಿಸಿದೆ.

ಏಕದಿನ ಸರಣಿ ಮತ್ತು ಎರಡು ಟ್ವೆಂಟಿ -20 ಸರಣಿಗಳೊಂದಿಗೆ ಮೂರು ಟೆಸ್ಟ್ ಪಂದ್ಯಗಳಿಗೆ ಲಭ್ಯವಿರುವ ಅತ್ಯುತ್ತಮ ತಂಡವನ್ನು ಜನವರಿಯಲ್ಲಿ ಪ್ರವಾಸಕ್ಕೆ ಕಳುಹಿಸಲಾಗುವುದು ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಭರವಸೆ ನೀಡಿತ್ತು. ಆದರೆ ಇದೀಗ ಟೆಸ್ಟ್ ಪಂದ್ಯಗಳನ್ನು ಕಡಿಮೆ ಮಾಡಲು ಬಯಸಿದೆ.

 ‘‘ಮೂರರಿಂದ ಎರಡು ಟೆಸ್ಟ್‌ಗೆ ಇಳಿಸುವ ಆಯ್ಕೆ ಇದೆ. ಆದರೆ ಅದನ್ನು ಇನ್ನೂ ಅಂತಿಮಗೊಳಿಸಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಇದನ್ನು ಅಂತಿಮಗೊಳಿಸಲಾಗುವುದು ’’ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಅಧ್ಯಕ್ಷ ರಿಕಿ ಸ್ಕೆರಿಟ್ ತಿಳಿಸಿದ್ದಾರೆ.

‘‘ನಾವು ಬಾಂಗ್ಲಾದೇಶಕ್ಕೆ ಬರಲು ಬಯಸುತ್ತೇವೆ ಏಕೆಂದರೆ ನಾವು ಹೊಂದಿರುವ ಸಂಬಂಧ ಮತ್ತು ದ್ವಿಪಕ್ಷೀಯ ಒಪ್ಪಂದಗಳನ್ನು ನಾವು ಗೌರವಿಸುತ್ತೇವೆ ’’ ಎಂದು ಅವರು ಹೇಳಿದ್ದಾರೆ.

ಮಾರ್ಚ್‌ನಿಂದ ಬಾಂಗ್ಲಾದೇಶ ಇನ್ನೂ ಯಾವುದೇ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ಆದರೆ ವಿಂಡೀಸ್ ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಕೋವಿಡ್-19 ವಿರಾಮದ ನಂತರ ಪ್ರವಾಸ ಕೈಗೊಂಡ ವಿಶ್ವದ ಮೊದಲ ತಂಡವಾಗಿದೆ ವೆಸ್ಟ್ ಇಂಡೀಸ್. ವೆಸ್ಟ್ ಇಂಡೀಸ್ ಇದೀಗ ಮೂರು ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಮತ್ತು ಎರಡು ಟೆಸ್ಟ್ ಪಂದ್ಯಗಳಿಗಾಗಿ ನ್ಯೂಝಿಲ್ಯಾಂಡ್ ಪ್ರವಾಸದಲ್ಲಿದೆ. ಡಿಸೆಂಬರ್ 15ಕ್ಕೆ ಪ್ರವಾಸ ಸರಣಿ ಕೊನೆಗೊಳ್ಳಲಿದೆ.

‘‘ ಬಾಂಗ್ಲಾದೇಶ ಸೇರಿದಂತೆ  ಯಾವುದೇ ಪ್ರವಾಸಕ್ಕೂ ವಿಂಡೀಸ್ ಯಾವಾಗಲೂ ಲಭ್ಯವಿರುವ ಅತ್ಯುತ್ತಮ ತಂಡವನ್ನು ಕಳುಹಿಸಲಿದೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ಬಾಂಗ್ಲಾದೇಶ ಪ್ರವಾಸವು ಯಾವಾಗಲೂ ಸವಾಲಿನ ಪ್ರವಾಸವಾಗಿದೆ ಎಂದು ನಾವು ನಂಬುತ್ತೇವೆ.ಏಕೆಂದರೆ ಅಲ್ಲಿ ನಮ್ಮ ಪರಿಸ್ಥಿತಿಗಳಿಗೆ ಬಹಳ ಭಿನ್ನವಾದ ವಾತಾವರಣವಿದೆ’’ಎಂದು ಸ್ಕೆರಿಟ್ ಹೇಳಿದರು.

ವಿದೇಶ ಮತ್ತು ಸ್ವದೇಶ ಸರಣಿಯಲ್ಲಿ ಭಾಗವಹಿಸಲು ನಾವು ಎಲ್ಲವನ್ನು ಮಾಡುತ್ತಿದ್ದೇವೆ. ಆದರೆ ಕೋವಿಡ್-19 ಕಾರಣದಿಂದಾಗಿ ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಅಡ್ಡಿಯಾಗುತ್ತಿದೆ ’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News