ನ್ಯೂಝಿಲ್ಯಾಂಡ್ ಪ್ರವಾಸದಿಂದ ಫಾಖರ್ ಝಮಾನ್ ಹೊರಕ್ಕೆ

Update: 2020-11-23 17:51 GMT

ಇಸ್ಲಾಮಾಬಾದ್, ನ.23: ಜ್ವರದಿಂದ ಬಳಲುತ್ತಿರುವ ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಫಾಖರ್ ಝಮಾನ್ ನ್ಯೂಝಿಲ್ಯಾಂಡ್ ಪ್ರವಾಸದಿಂದ ದೂರ ಉಳಿಯಲಿದ್ದಾರೆ.

ತಂಡದ ವೈದ್ಯ ಸೊಹೈಲ್ ಸಲೀಮ್ ಅವರು ಝಮಾನ್‌ರನ್ನು ಶನಿವಾರ ಕೋವಿಡ್-19 ಪರೀಕ್ಷೆಗೆ ಒಳಪಡಿಸಿದ್ದರು. ಆದರೆ ಅವರಿಗೆ ಸೋಂಕು ಕಂಡು ಬಂದಿರಲಿಲ್ಲ. ಆದರೆ ಝಮಾನ್‌ಗೆ ಜ್ವರ ಕಾಣಿಸಿಕೊಂಡಿದೆ.

 ಜ್ವರದ ಕಾರಣದಿಂದಾಗಿ ಝಮಾನ್ ಅವರನ್ನು ನ್ಯೂಝಿಲ್ಯಾಂಡ್ ಪ್ರವಾಸಕ್ಕೆ ಕಳುಹಿಸುವ ನಿರ್ಧಾರವನ್ನು ಹಿಂಪಡೆಯಲಾಗಿದೆ. ತಂಡದ ಇತರ ಸದಸ್ಯರ ಆರೋಗ್ಯದ ಹಿತ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಕಟನೆೆಯಲ್ಲಿ ತಿಳಿಸಿದೆ.

30ರ ಹರೆಯದ ಝಮಾನ್ ಅವರನ್ನು ತಂಡದ ಹೋಟೆಲ್‌ನಲ್ಲಿ ಪಾಕಿಸ್ತಾನ ತಂಡದಿಂದ ಪ್ರತ್ಯೇಕಿಸಲಾಗಿದೆ. ಅವರು ಸಹ ಆಟಗಾರರೊಂದಿಗೆ ಪ್ರಯಾಣಿಸಲು ಯೋಗ್ಯರಲ್ಲ ಎಂದು ಘೋಷಿಸಲಾಗಿದೆ ಎಂದು ಪಿಸಿಬಿ ತಿಳಿಸಿದೆ.

ಜಮಾನ್ 47 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 4 ಶತಕ ಮತ್ತು 13 ಅರ್ಧ ಶತಕಗಳನ್ನು ಒಳಗೊಂಡ 1,960 ರನ ಗಳಿಸಿದ್ದಾರೆ. ಔಟಾಗದೆ 210 ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. 40 ಟ್ವೆಂಟಿ -20 ಪಂದ್ಯಗಳಲ್ಲಿ 4 ಅರ್ಧ ಶತಕಗಳನ್ನು ಒಳಗೊಂಡ 838 ರನ್, 3 ಟೆಸ್ಟ್‌ಗಳಲ್ಲಿ 2 ಅರ್ಧಶತಕ, 192 ರನ್ ಗಳಿಸಿದ್ದಾರೆ. 94 ರನ್ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ನ್ಯೂಝಿಲ್ಯಾಂಡ್‌ನಲ್ಲಿ ಪಾಕಿಸ್ತಾನ ಮೂರು ಟ್ವೆಂಟಿ -20 ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಪ್ರವಾಸ ಸರಣಿ ಡಿಸೆಂಬರ್ 18ರಂದು ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಮೊದಲ ಟ್ವೆಂಟಿ-20 ಪಂದ್ಯದೊಂದಿಗೆ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News