ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಇಶಾಂತ್, ರೋಹಿತ್ ಶರ್ಮಾ ಅಲಭ್ಯ

Update: 2020-11-24 13:00 GMT

ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ಧ ಮುಂಬರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಭಾರತದ ಕ್ರಿಕೆಟಿಗರಾದ ಇಶಾಂತ್ ಶರ್ಮಾ ಹಾಗೂ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ. ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಆಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇಶಾಂತ್ ಮೂರನೇ ಟೆಸ್ಟ್ ನಲ್ಲಿ ಸ್ಪರ್ಧೆಯಲ್ಲಿರಬೇಕಾದರೆ ಬೌಲಿಂಗ್ ಫಿಟ್ನೆಸ್ ಪಡೆಯುವ ಅಗತ್ಯವಿದೆ. ಆಸ್ಟ್ರೇಲಿಯದಲ್ಲಿ 14 ದಿನಗಳ ಕಠಿಣ ಕ್ವಾರಂಟೈನ್ ನಿಯಮ ಜಾರಿಯಲ್ಲಿರುವ ಕಾರಣ ಇಶಾಂತ್ 2 ವಾರಗಳ ಬಳಿಕವಷ್ಟೇ ತರಬೇತಿ ಆರಂಭಿಸಬಹುದು.

ಐಪಿಎಲ್ ವೇಳೆ ಸ್ನಾಯುಸೆಳೆತಕ್ಕೆ ಒಳಗಾಗಿದ್ದ ರೋಹಿತ್ ಇನ್ನೂ ಸಂಪೂರ್ಣ ಫಿಟ್ನೆಸ್ ಪಡೆದಿಲ್ಲ. ಡಿಸೆಂಬರ್ 2ನೇ ವಾರದಲ್ಲಿ ಅವರಿಗೆ ಪ್ರಯಾಣಕ್ಕೆ ಅವಕಾಶ ಲಭಿಸಲಿದೆ. ಎರಡುವಾರಗಳ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ ಬಳಿಕವಷ್ಟೇ ರೋಹಿತ್ ಫಿಟ್ನೆಸ್ ಅಂತಿಮವಾಗಿ ಅವಲೋಕಿಸಲಾಗುತ್ತದೆ.  ರೋಹಿತ್ ಗೆ ಟೆಸ್ಟ್ ಸರಣಿಯಲ್ಲಿ ಒಳಗೊಳ್ಳುವ ಉತ್ತಮ ಅವಕಾಶವಿದ್ದು ಅವರು ಯುಎಇಯಿಂದ ತಂಡದ ಇತರ ಸದಸ್ಯರೊಂದಿಗೆ ನೇರವಾಗಿ ಆಸ್ಟ್ರೇಲಿಯಕ್ಕೆ ತೆರಳಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಶಾಂತ್ ಶರ್ಮಾ ಐಪಿಎಲ್ ಟೂರ್ನಿಯಿಂದ ಬೇಗನೆ ಸ್ವದೇಶಕ್ಕೆ  ವಾಪಸಾದ ಬಳಿಕ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಒಂದು ತಿಂಗಳಿಂದ ಅಭ್ಯಾಸ ನಡೆಸುತ್ತಿದ್ದು ಸಂಪೂರ್ಣ ಫಿಟ್ನೆಸ್ ಪಡೆದಿದ್ದಾರೆ.

ಒಂದು ವೇಳೆ ರೋಹಿತ್ ಟೆಸ್ಟ್ ಸರಣಿಗೆ ಅಲಭ್ಯರಾದರೆ, ಶ್ರೇಯಸ್ ಅಯ್ಯರ್ ಅವರತ್ತ ಆಯ್ಕೆ ಸಮಿತಿ ದೃಷ್ಟಿ ಹರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News