ಐಎಸ್‌ಎಲ್: ಗೋವಾಕ್ಕೆ ಸೋಲುಣಿಸಿದ ಮುಂಬೈ ಸಿಟಿ

Update: 2020-11-25 16:09 GMT

ಫಟೋರ್ಡಾ, ನ.25: ಇಂಡಿಯನ್ ಸೂಪರ್ ಲೀಗ್‌ನ(ಐಎಸ್‌ಎಲ್)ಬುಧವಾರ ನಡೆದ ಆರನೇ ಪಂದ್ಯದಲ್ಲಿ ಗೋವಾ ಎಫ್‌ಸಿ ವಿರುದ್ಧ ಮುಂಬೈ ಸಿಟಿ ಎಫ್‌ಸಿ 1-0 ಗೋಲುಗಳ ಅಂತರದಿಂದ ರೋಚಕ ಜಯ ಸಾಧಿಸಿದೆ.

 ಇಲ್ಲಿನ ಫಟೋರ್ಡಾ ಸ್ಟೇಡಿಯಂನಲ್ಲಿ ನಡೆದ ಪಂದ್ಯವು ಮೊದಲಾರ್ಧದ ಅಂತ್ಯಕ್ಕೆ 0-0 ಯಿಂದ ಅಂತ್ಯಗೊಂಡಿತ್ತು. ಮೊದಲಾರ್ಧದ ಕೊನೆಯ ಕೆಲವು ನಿಮಿಷಗಳಲ್ಲಿ ಮುಂಬೈ ಸಿಟಿ, ಗೋವಾದ ರಕ್ಷಣಾ ಗೋಡೆಯನ್ನು ಬೇಧಿಸಲು ಯತ್ನಿಸಿತು. ಗೋವಾದ ಮಿಡ್‌ಫೀಲ್ಡರ್ ರೆಡೀಮ್ ಟ್ಲಾಂಗ್ 40ನೇ ನಿಮಿಷದಲ್ಲಿ ಕೆಂಪುಕಾರ್ಡ್ ಪಡೆದರು.

ಕೊನೆಗೂ ಹೆಚ್ಚುವರಿ ಸಮಯ(90+5)ದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಮುಂಬೈ ಸಿಟಿ ತಂಡದ ಆ್ಯಡಂ ಲಿ ಫೋಂಡ್ರೆ ಗೋಲು ಗಳಿಸಿ ಪಂದ್ಯವನ್ನು ಗೋಲುರಹಿತ ಡ್ರಾಗೊಳಿಸುವ ಕನಸು ಕಾಣುತ್ತಿದ್ದ ಗೋವಾಕ್ಕೆ ಶಾಕ್ ನೀಡಿದರು. ತನ್ನ ತಂಡಕ್ಕೆ ಅಮೂಲ್ಯ ಅಂಕ ಒದಗಿಸಿಕೊಟ್ಟರು.

ಗೋವಾ ಎಫ್‌ಸಿ ಐಎಸ್‌ಎಲ್‌ನಲ್ಲಿ 14 ಬಾರಿ ಮುಂಬೈ ಎಫ್‌ಸಿಯನ್ನು ಎದುರಿಸಿತ್ತು. ಏಳು ಬಾರಿ ಮಣಿಸಲು ಶಕ್ತವಾಗಿತ್ತು. ಮುಂಬೈ ಕೇವಲ ನಾಲ್ಕುಬಾರಿ ಮಾತ್ರ ಗೋವಾದ ಎದುರು ಗೆಲುವಿನ ನಗೆ ಬೀರಿತ್ತು. ಗೋವಾ ಎಫ್‌ಸಿ ಮುಂಬೈ ಸಿಟಿ ವಿರುದ್ಧ 33 ಗೋಲುಗಳನ್ನು ಗಳಿಸಿದೆ. ಇದೇ ವೇಳೆ ಗೋವಾ ಎದುರಿನ ಮುಖಾಮುಖಿಯಲ್ಲಿ ಮುಂಬೈ 14 ಗೋಲುಗಳನ್ನು ಜಮೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News