ಫುಟ್ಬಾಲ್ ದಂತಕತೆ ಮರಡೋನ ನಿಧನ

Update: 2020-11-25 18:10 GMT

 ಬ್ಯುನಸ್ ಐರಿಸ್, ನ.25: ಅರ್ಜೆಂಟೀನದ ಫುಟ್ಬಾಲ್ ದಂತಕತೆ ಡಿಯಾಗೊ ಮರಡೋನ ಬುಧವಾರ ಹೃದಯ ಸ್ತಂಭನದಿಂದ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಫುಟ್ಬಾಲ್ ಐಕಾನ್ ನಿಧನರಾಗಿರುವ ಸುದ್ದಿಯನ್ನು ಮರಡೋನರ ವಕೀಲರು ದೃಢಪಡಿಸಿದ್ದಾರೆ ಎಂದು ಸುದ್ದಿಸಂಸ್ಥೆ ರಾಯ್ಟರ್ಸ್ ವರದಿ ಮಾಡಿದೆ.

ಮೆದುಳಿನಲ್ಲಿ ರಕ್ತ ಸ್ರಾವದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆದು ಎರಡು ವಾರಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಮರಡೋನ 60ನೇ ಹುಟ್ಟುಹಬ್ಬ ಆಚರಿಸಿದ ಕೆಲವು ದಿನಗಳ ಬಳಿಕ ತಮ್ಮ ನಿವಾಸದಲ್ಲಿ ನಿಧನರಾದರು.

ಮರಡೋನ ಅವರು 1986ರಲ್ಲಿ ಅರ್ಜೆಂಟೀನಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದರು. ವಿವಾದಕ್ಕೆ ಕಾರಣವಾಗಿದ್ದ  ‘ಹ್ಯಾಂಡ್ ಆಫ್ ಗಾಡ್’ ಗೋಲು (ದೇವರ ಕೈ ಗೋಲು) ಮೂಲಕ ಇಂಗ್ಲೆಂಡ್‌ನ್ನು ಟೂರ್ನಮೆಂಟ್‌ನಿಂದ ಹೊರ ದಬ್ಬಿದ್ದರು. ಈ ಗೋಲು ಸಾರ್ವಕಾಲಿಕ ಶ್ರೇಷ್ಠ ಗೋಲುಗಳಲ್ಲಿ ಒಂದಾಗಿದೆ ಪರಿಗಣಿಸಲ್ಪಟ್ಟಿದೆ.

ಲೀಗ್‌ಗಳಲ್ಲೂ ಯಶಸ್ಸು ಸಾಧಿಸಿರುವ ಮರಡೋನ ಇಟಲಿಯ ಕ್ಲಬ್ ನಪೋಲಿ ಪರ 1987 ಹಾಗೂ 1990ರಲ್ಲಿ ಸೀರಿ ಎ ಪ್ರಶಸ್ತಿಯನ್ನು ಜಯಿಸಿದ್ದರು. 1987 ರಲ್ಲಿ ಇಟಾಲಿಯನ್ ಕಪ್ ಹಾಗೂ 1991ರಲ್ಲಿ ಯುಇಎಫ್‌ಎ ಕಪ್‌ನ್ನು ಗೆದ್ದಿದ್ದರು. ಈ ಅವಧಿಯಲ್ಲಿ ಅವರು ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು. 1991ರಲ್ಲಿ ಅವರು ಕ್ಲಬ್‌ನ್ನು ತೊರೆದಿದ್ದರು. ಡ್ರಗ್ ನಿಯಮ ಉಲ್ಲಂಘಿಸಿರುವುದಕ್ಕೆ 15 ತಿಂಗಳ ಕಾಲ ನಿಷೇಧ ಎದುರಿಸಿದ್ದರು.

1994ರಲ್ಲಿ ಡ್ರಗ್ಸ್ ಪರೀಕ್ಷೆಯಲ್ಲಿ ವಿಫಲವಾದ ಬಳಿಕ ಮರಡೋನ ಅವರು ವಿಶ್ವಕಪ್‌ನಿಂದ ಹೊರಗುಳಿದಿದ್ದರು. 1997ರಲ್ಲಿ ಫುಟ್ಬಾಲ್‌ನಿಂದ ನಿವೃತ್ತಿಯಾದರು.

1999 ಹಾಗೂ 2000ರಲ್ಲಿ ಹೃದಯದ ಸಮಸ್ಯೆಗಳಿಗಾಗಿ ಆಸ್ಪತ್ರೆಗೆ ಸೇರಿದ್ದರು. ಎರಡನೇ ಬಾರಿ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. 2004ರಲ್ಲಿ ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ದೇಹದ ತೂಕವನ್ನು ನಿಯಂತ್ರಿಸಲು ಎರಡು ಬಾರಿ ಗ್ಯಾಸ್ಟ್ರಿಕ್ ಬೈಪಾಸ್‌ಗೆ ಒಳಗಾಗಿದ್ದರು. ಜನವರಿಯಲ್ಲಿ ಹೊಟ್ಟೆಯೊಳಗೆ ರಕ್ತಸ್ರಾವಕ್ಕಾಗಿ ಚಿಕಿತ್ಸೆ ಪಡೆದಿದ್ದರು. ಜುಲೈನಲ್ಲಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮೂರು ವಾರಗಳ ಹಿಂದೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಆಸ್ಪತ್ರೆಗೆ ದಾಖಲಾಗಿ ಸರ್ಜರಿಗೆ ಒಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News