ಐಸಿಸಿ ಮುಖ್ಯಸ್ಥರಾಗಿ ಗ್ರೆಗ್ ಬಾರ್ಕ್ಲೇ ಆಯ್ಕೆ

Update: 2020-11-25 18:22 GMT

ದುಬೈ, ನ.25: ನ್ಯೂಝಿಲ್ಯಾಂಡ್ ಕ್ರಿಕೆಟ್ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಐಸಿಸಿಯ ನೂತನ ಸ್ವತಂತ್ರ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಮುಖ್ಯಸ್ಥ ಸ್ಥಾನಕ್ಕೆ ನಡೆದಿದ್ದ ಸ್ಪರ್ಧೆಯಲ್ಲಿ ಬಾರ್ಕ್ಲೇ ಅವರು ಪ್ರತಿಸ್ಪರ್ಧಿ ಸಿಂಗಾಪುರದ ಇಮ್ರಾನ್ ಖ್ವಾಜಾರನ್ನು ಸುಲಭವಾಗಿ ಸೋಲಿಸಿದರು. ಬಾಕ್ಲೇ ಅವರು ಭಾರತದ ಶಶಾಂಕ್ ಮನೋಹರ್ ಅವರಿಂದ ತೆರವಾದ ಸ್ಥಾನವನ್ನು ತುಂಬಿದ್ದಾರೆ.

ಮಂಗಳವಾರ ಐಸಿಸಿಯ ವಾರ್ಷಿಕ ತ್ರೈಮಾಸಿಕ ಸಭೆಯಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಯಿತು. ಇಲೆಕ್ಟ್ರಾನಿಕ್ ಮತದಾನ ಪ್ರಕ್ರಿಯೆಯಲ್ಲಿ 16 ನಿರ್ದೇಶಕರ ಮಂಡಳಿ ಭಾಗವಹಿಸಿತ್ತು. ಇದರಲ್ಲಿ 12 ಪೂರ್ಣ ಸದಸ್ಯರು (ಟೆಸ್ಟ್ ಆಡುವ ರಾಷ್ಟ್ರಗಳು) ಮೂವರು ಅಸೋಸಿಯೇಟ್ ರಾಷ್ಟ್ರಗಳ ನಿರ್ದೇಶಕರು ಹಾಗೂ ಒಬ್ಬರು ಸ್ವತಂತ್ರ ಮಹಿಳಾ ನಿರ್ದೇಶಕಿ(ಪೆಪ್ಸಿಕೋದ ಇಂದ್ರಾ ನೂಯಿ) ಇದ್ದರು.

‘‘ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಒಂದು ಗೌರವ. ನನ್ನ ಸಹವರ್ತಿ ಐಸಿಸಿ ನಿರ್ದೇಶಕರ ಬೆಂಬಲಕ್ಕಾಗಿ ನಾನು ಧನ್ಯವಾದಗಳನ್ನು ಸಮರ್ಪಿಸುತ್ತೇನೆ. ಕ್ರೀಡೆಯನ್ನು ಮುನ್ನಡೆಸಲು, ಜಾಗತಿಕ ಸಾಂಕ್ರಾಮಿಕ ರೋಗದಿಂದ ಹೊರಬಂದು ಬಲಿಷ್ಠ ಸ್ಥಾನವನ್ನು ತಲುಪುವ ವಿಶ್ವಾಸವಿದೆ. ನಮ್ಮ ಪ್ರಮುಖ ಮಾರುಕಟ್ಟೆಗಳಲ್ಲಿ ಕ್ರಿಕೆಟನ್ನು ಬಲಪಡಿಸಲು ನಮ್ಮ ಸದಸ್ಯರ ಸಹಭಾಗಿತ್ವದಲ್ಲಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ’’ ಎಂದು ಬಾರ್ಕ್ಲೇ ಹೇಳಿದರು. ನ್ಯೂಝಿಲ್ಯಾಂಡ್‌ನ ಬಾರ್ಕ್ಲೇ 11-5 ಮತಗಳ ಅಂತರದಿಂದ ಜಯ ಸಾಧಿಸಿದರು. ಎರಡನೇ ಸುತ್ತಿನ ಮತದಾನದಲ್ಲಿ ಕ್ರಿಕೆಟ್ ದಕ್ಷಿಣ ಆಫ್ರಿಕಾದಿಂದ ಎಲ್ಲ ಪ್ರಮುಖ ಗೆಲುವಿನ ಮತಗಳನ್ನು ಪಡೆದರು.

ಕಳೆದ ವಾರ ನಡೆದ ಮೊದಲ ಸುತ್ತಿನ ಮತದಾನದಲ್ಲಿ ಬಾರ್ಕ್ಲೇ 10 ಮತಗಳನ್ನು ಪಡೆದಿದ್ದರೆ, ಖ್ವಾಜಾ ಆರು ಮತಗಳನ್ನು ಪಡೆದಿದ್ದರು. ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಗೆಲ್ಲಲು 11ಮತಗಳ ಅಗತ್ಯವಿದೆ. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯದ ಜೊತೆಗೆ ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿಗಳು ಬಾರ್ಕ್ಲೇಗೆ ಮತ ಚಲಾಯಿಸಿದವು. ಮತ್ತೊಂದೆಡೆ ಖ್ವಾಜಾಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬೆಂಬಲ ನೀಡಿತ್ತು. ಸಿಂಗಾಪುರದ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ಖ್ವಾಜಾ ಅವರು ಐಸಿಸಿ ಸ್ಪರ್ಧೆಗಳನ್ನು ಹೆಚ್ಚಿಸ ಬೇಕು. ಇದು ಅಸೋಸಿಯೇಟ್ ದೇಶಗಳ ಆದಾಯವನ್ನು ಹೆಚ್ಚಿಸುತ್ತದೆ ಎಂದು ವಾದ ಮಂಡಿಸಿದ್ದರು.

ಆಕ್ಲೆಂಡ್ ಮೂಲದ ವಾಣಿಜ್ಯ ವಕೀಲರಾಗಿರುವ ಬಾರ್ಕ್ಲೇ 2012ರಿಂದ ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿಯಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.ಪ್ರಸ್ತುತ ಐಸಿಸಿಯಲ್ಲಿ ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿಯನ್ನು ಪ್ರತಿನಿಧಿಸುತ್ತಿದ್ದಾರೆ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2015ರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಬಾರ್ಕ್ಲೇ ನಾರ್ಥರ್ನ್ ಡಿಸ್ಟ್ರಿಕ್ಸ್ ಅಸೋಸಿಯೇಶನ್‌ನ ಮಾಜಿ ಮಂಡಳಿ ಸದಸ್ಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News