ಕೇರಳದಲ್ಲಿ ಫುಟ್ಬಾಲ್ ಆಕೃತಿಯ ಕೇಕ್ ಕತ್ತರಿಸಲು ಮರಡೋನಾ ನಿರಾಕರಿಸಲು ಕಾರಣವೇನು ಗೊತ್ತಾ?

Update: 2020-11-27 10:48 GMT

ತಿರುವನಂತಪುರಂ: ಇತ್ತೀಚೆಗೆ ನಿಧನರಾದ ಫುಟ್ಬಾಲ್ ದಂತಕಥೆ ಡೀಗೋ ಮರಡೋನಾ ಅವರು 2012ರಲ್ಲಿ ಕೇರಳಕ್ಕೆ ಭೇಟಿ ನೀಡಿದ್ದ ಸಂದರ್ಭ ಫುಟ್ಬಾಲ್ ಮಾದರಿಯ ಕೇಕ್ ಕತ್ತರಿಸಲು ನಿರಾಕರಿಸಿದ್ದ ಘಟನೆಯನ್ನು ಸ್ಮರಿಸಿರುವ ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಐ.ಎಂ. ವಿಜಯನ್, ಮರಡೋನಾ ಅವರಿಗೆ ಫುಟ್ಬಾಲ್ ಆಟದ ಮೇಲೆ ಇದ್ದ ಅಪರಿಮಿತ ಪ್ರೀತಿಯನ್ನು ಕಂಡು ತಾನು ದಂಗಾಗಿದ್ದನ್ನು ವಿವರಿಸಿದ್ದಾರೆ.

ವಿಜಯನ್ ಅವರಿಗೆ ಮರಡೋನಾ ಅವರನ್ನು ಭೇಟಿಯಾಗುವ, ಅವರ ಜತೆ ಸ್ವಲ್ಪ ಫುಟ್ಬಾಲ್ ಆಡುವ ಹಾಗೂ  ಅವರನ್ನು ಆಲಂಗಿಸುವ ಸದವಕಾಶ ದೊರಕಿತ್ತು.

2012ರಲ್ಲಿ ಕಣ್ಣೂರಿನಲ್ಲಿ ಬಾಬಿ ಚೆಮ್ಮನ್ನೂರ್ ಅವರ ಚಿನ್ನಾಭರಣ ಶೋರೂಂ ಉದ್ಘಾಟನೆ ಸಂಬಂಧ ಆಯೋಜಿಸಲಾಗಿದ್ದ  ಸಮಾರಂಭಕ್ಕೆ ಮರಡೋನಾ ಆಗಮಿಸಿದ್ದರು.

“ಮರಡೋನಾ ಅವರಿಗೆ ಫುಟ್ಬಾಲ್ ಎಂದರೆ ಅದೆಷ್ಟು ಪಂಚಪ್ರಾಣವೆಂದು ನನಗೆ ಆಗ ತಿಳಿದು ಬಂತು. ಕಾರ್ಯಕ್ರಮದ ಭಾಗವಾಗಿ  ಅಂಗಳ ಹಾಗೂ ಅದರ ನಡುವೆ ಫುಟ್ಬಾಲ್ ಮಾದರಿಯ ಕೇಕ್ ತಯಾರಿಸಲಾಗಿತ್ತು. ಅದನ್ನು ನೋಡಿದ ಕೂಡಲೇ ಅದನ್ನು ಕತ್ತರಿಸಲು ನಿರಾಕರಿಸಿದ ಮರಡೋನಾ ಕೇಕಿನ ಹೊರಭಾಗವನ್ನು ಮಾತ್ರ ಕತ್ತರಿಸಿದರು'' ಎಂದು ವಿಜಯನ್ ನೆನಪಿಸುತ್ತಾರೆ.

``ವೇದಿಕೆಯಲ್ಲಿ ಎರಡು ನಿಮಿಷ ಅವರ ಜತೆ ಫುಟ್ಬಾಲ್ ಆಟ ಆಡಿದ್ದು ನನ್ನ ಜೀವನದ ಅತ್ಯಂತ ಸ್ಮರಣೀಯ ಘಟನೆ,'' ಎಂದು ಹೇಳಿದ ವಿಜಯನ್, ಮರಡೋನಾ ಅವರದ್ದು ಮಗುವಿನಂತಹ ಹೃದಯ, ಎಲ್ಲವನ್ನೂ ನೇರಾನೇರವಾಗಿ ಹೇಳುತ್ತಾರೆ, ಅವರ ಈ ಧೋರಣೆಯೇ ಅವರಿಗೆ ಹಲವು ಸಮಸ್ಯೆ ಸೃಷ್ಟಿಸಿರಬಹುದು'' ಎಂದು ವಿಜಯನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News