ಮೊದಲ ಏಕದಿನ ಪಂದ್ಯ: ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ 66 ರನ್ ಗಳ ಸೋಲು

Update: 2020-11-27 12:28 GMT
Photo: twitter.com/ICC

ಸಿಡ್ನಿ: ಶಿಖರ್ ಧವನ್ ಹಾಗೂ ಹಾರ್ದಿಕ್ ಪಾಂಡ್ಯ ಹೋರಾಟದ ಹೊರತಾಗಿಯೂ ಭಾರತ ತಂಡವು ಆಸ್ಟ್ರೇಲಿಯದ ವಿರುದ್ಧ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 66 ರನ್ ಗಳ ಸೋಲುಂಡಿದೆ.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 374 ರನ್ ಗಳಿಸಿತು. ಇನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್(69) ಹಾಗೂ ಫಿಂಚ್(114, 124 ಎಸೆತ, 9 ಬೌಂಡರಿ.2 ಸಿಕ್ಸರ್)ಮೊದಲ ವಿಕೆಟ್‌ಗೆ 156 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು.

ಸ್ಮಿತ್ ಕೇವಲ 66 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಿತ 105 ರನ್ ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಭಾರತದ ಬೌಲಿಂಗ್ ವಿಭಾಗದಲ್ಲಿ ಮುಹಮ್ಮದ್ ಶಮಿ(3-59)ಯಶಸ್ವಿ ಬೌಲರ್ ಎನಿಸಿಕೊಂಡರು.

375 ರನ್ ಗಳ ಗುರಿ ಪಡೆದ ಭಾರತ ತಂಡವು ಉತ್ತಮ ಆರಂಭ ಪಡೆಯಿತಾದರೂ ಬಳಿಕ 100 ರನ್ ಆಗುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭ ಶಿಖರ್ ಧವನ್ ಹಾಗೂ ಹಾರ್ದಿಕ್ ಪಾಂಡ್ಯ ಉತ್ತಮ ಜೊತೆಯಾಟ (146)ದ ಮೂಲಕ ತಂಡವನ್ನು ಆಧರಿಸಿದರು. ಧವನ್ 74 ( 86 ಎಸೆತ) ರನ್ ಗಳಿಸಿ ಔಟಾದರೆ, ಪಾಂಡ್ಯ 76 ಎಸೆತಗಳಲ್ಲಿ 90 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇವರಿಬ್ಬರ ನಿರ್ಗಮನದ ಬಳಿಕ ತಂಡ ಸೋಲಿನತ್ತ ಮುಖ ಮಾಡಿತು.

ಅಂತಿಮವಾಗಿ ಭಾರತ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 308 ರನ್ ಗಳಿಸಿ 66 ರನ್ ಗಳ ಸೋಲು ಕಂಡಿತು. ವಿರಾಟ್ ಕೊಹ್ಲಿ 21, ಅಗರವಾಲ್ 22, ಜಡೇಜ 25, ಸೈನಿ 29 ರನ್ ಗಳಿಸಿದರು.

ಆಸ್ಟ್ರೇಲಿಯ ಪರ ಆ್ಯಡಮ್ ಝಾಂಪ 4, ಜೋಶ್ ಹ್ಯಾಝ್ಲೆವುಡ್ 3 ವಿಕೆಟ್ ಪಡೆದರು. ಭರ್ಜರಿ ಶತಕ ಸಿಡಿಸಿದ ಸ್ಟೀವನ್ ಸ್ಮಿತ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News