ಇಂದು ಎರಡನೇ ಏಕದಿನ ಪಂದ್ಯ: ಸರಣಿ ಸಮಬಲ ಸಾಧಿಸಲು ಕೊಹ್ಲಿ ಪಡೆ ಪ್ರಯತ್ನ

Update: 2020-11-28 18:35 GMT

ಸಿಡ್ನಿ: ಸಿಡ್ನಿಯಲ್ಲಿ ಭಾರತದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಏಕದಿನ ಪಂದ್ಯವನ್ನು ತವರು ತಂಡ ಆಸ್ಟ್ರೇಲಿಯ ಗೆದ್ದಿದೆ. ಎರಡನೇ ಪಂದ್ಯ ರವಿವಾರ ನಡೆಯಲಿದೆ.

ಒಂದು ವೇಳೆ ಆಸ್ಟ್ರೇಲಿಯ ಈ ಪಂದ್ಯವನ್ನು ಜಯಿಸಿದರೆ ಮೂರು ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಆಡಲು ಬಾಕಿ ಇರುವಾಗಲೇ ಸರಣಿ ಆಸ್ಟ್ರೇಲಿಯದ ವಶವಾಗುತ್ತದೆ. ಆದರೆ ಭಾರತ ಸರಣಿ ಗೆಲುವಿಗೆ ಉಳಿದಿರುವ ಎರಡು ಪಂದ್ಯಗಳಲ್ಲೂ ಜಯ ಗಳಿಸಬೇಕಾಗುತ್ತದೆ.

 ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಜಗತ್ತು ತತ್ತರಿಸಿದ ನಂತರ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಉಪಸ್ಥಿತಿಯಲ್ಲಿ ನಡೆಯಲಿರುವ ಎರಡನೇ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಗಿದೆ.

  ಭಾರತಕ್ಕೆ ಮೊದಲ ಏಕದಿನ ಪಂದ್ಯದಲ್ಲಿ 66 ರನ್‌ಗಳ ಸೋಲು ಶುಭಕಾರಿಯಲ್ಲ. ಬ್ಯಾಟಿಂಗ್‌ನಲ್ಲಿ ತಂಡ ಉತ್ತಮವಾಗಿದ್ದರೂ, ದುರ್ಬಲ ಬೌಲಿಂಗ್ ತಂಡಕ್ಕೆ ಗೆಲುವು ನಿರಾಕರಿಸಿತು. ಫೀಲ್ಡಿಂಗ್ ಕೂಡಾ ಕಳಪೆಯಾಗಿತ್ತು. ಆಸ್ಟ್ರೇಲಿಯ 374 ರನ್ ಗಳಿಸಿರುವುದು ಕೊಹ್ಲಿ ಪಡೆಗೆ ಎಚ್ಚರಿಕೆಯ ಗಂಟೆಯಾಗಿದೆ. 6ನೇ ಬೌಲರ್ ಅನುಪಸ್ಥಿತಿ ತಂಡದ ಪಾಲಿಗೆ ದುಬಾರಿಯಾಗಿದೆ. ಇನ್ನೊಬ್ಬ ಬೌಲರ್‌ನ್ನು ತೆಗೆದುಕೊಂಡರೆ ಓರ್ವ ಬೌಲರ್‌ನ್ನು ಕೈ ಬಿಡಬೇಕಾಗುತ್ತದೆ. ಈ ಕಾರಣದಿಂದಾಗಿ ಮುಂದಿನ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಲೋಕೇಶ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ ಉತ್ತಮ ಬ್ಯಾಟಿಂಗ್ ಮೂಲಕ ಮಿಂಚಿದವರು. ಕ್ರಮವಾಗಿ 650 ಮತ್ತು 400 ರನ್ ಜಮೆ ಮಾಡಿದ್ದರು. ಆದರೆ ಮೊದಲ ಪಂದ್ಯದಲ್ಲಿ ಅವರು ವಿಫಲರಾದರು. ನಾಯಕ ಕೊಹ್ಲಿ ಕೂಡಾ ದೊಡ್ಡ ಕೊಡುಗೆ ನೀಡಲಿಲ್ಲ. ಆದರೆ ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ನೀಡಿದ ಪ್ರದರ್ಶನವನ್ನು ಇಲ್ಲೂ ಮುಂದುವರಿಸಿದರು. ಪಾಂಡ್ಯ ಮತ್ತು ಶಿಖರ್ ಧವನ್ ಅವರ ತ್ತಮ ಪ್ರದರ್ಶನ ದಿಂದಾಗಿ ತಂಡದ ಸ್ಕೋರ್ 300ರ ಗಡಿ ದಾಟಿತ್ತು.

 ನವದೀಪ್ ಸೈನಿ ಗಾಯಗೊಂಡಿರುವ ಕಾರಣದಿಂದಾಗಿ ತಮಿಳುನಾಡಿನ ಎಡಗೈ ವೇಗಿ ಟಿ. ನಟರಾಜನ್‌ಗೆ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ನಟರಾಜನ್ ಚೊಚ್ಚಲ ಅಂತರ್‌ರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಉಳಿದಂತೆ ಅಂತಿಮ ಹನ್ನೊಂದರ ಬಳಗದಲ್ಲಿ ಬದಲಾವಣೆ ಇಲ್ಲ.

ಮೊದಲನೆ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡದ ನಾಯಕ ಆ್ಯರನ್ ಫಿಂಚ್ (114) ಮತ್ತು ಸ್ಟೀವ್ ಸ್ಮಿತ್ ಶತಕ(105), ಡೇವಿಡ್ ವಾರ್ನರ್ ಅರ್ಧಶತಕ(69) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 45 ರನ್ ನೆರವಿನಲ್ಲಿ ಆಸ್ಟ್ರೇಲಿಯ 6 ವಿಕೆಟ್ ನಷ್ಟದಲ್ಲಿ 374 ರನ್ ಗಳಿಸಿತ್ತು. ಎರಡನೇ ಪಂದ್ಯದಲ್ಲಿ ಮಾರ್ಕುಸ್ ಸ್ಟೋನಿಸ್ ಆಡುವ ಸಾಧ್ಯತೆ ಕಡಿಮೆ ಇದೆ. ಗಾಯಗೊಂಡಿರುವ ಅವರ ಬದಲಿಗೆ ಕ್ರಿಸ್ ಗ್ರೀನ್ ಅಂತಿಮ ಹನ್ನೊಂದರಲ್ಲಿ ಆಡುವ ಅವಕಾಶಕ್ಕಾಗಿ ನೋಡುತ್ತಿದ್ದಾರೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News