ನ್ಯೂಝಿಲ್ಯಾಂಡ್ ಪರ ಗ್ಲೆನ್ ಫಿಲಿಪ್ಸ್ ವೇಗದ ಟ್ವೆಂಟಿ-20 ಶತಕ

Update: 2020-11-29 06:17 GMT

 ವೆಲ್ಲಿಂಗ್ಟನ್: ನ್ಯೂಝಿಲ್ಯಾಂಡ್ ಪರವಾಗಿ ವೇಗದ ಟ್ವೆಂಟಿ-20 ಶತಕವನ್ನು ದಾಖಲಿಸಿದ ಗ್ಲೆನ್ ಫಿಲಿಪ್ಸ್ ವೆಸ್ಟ್‌ಇಂಡೀಸ್ ವಿರುದ್ಧ ರವಿವಾರ ಇಲ್ಲಿ ನಡೆದ 2ನೇ ಟ್ವೆಂಟಿ-20 ಪಂದ್ಯದಲ್ಲಿ ಆತಿಥೇಯರು 72 ರನ್‌ಗಳ ಭರ್ಜರಿ ಜಯ ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆಯಲ ನೆರವಾದರು.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಫಿಲಿಪ್ಸ್ 51 ಎಸೆತಗಳ ಇನಿಂಗ್ಸ್‌ನಲ್ಲಿ 8 ಸಿಕ್ಸರ್‌ಗಳು ಹಾಗೂ 10 ಬೌಂಡರಿಗಳನ್ನು ಸಿಡಿಸಿದರು. ಫಿಲಿಪ್ಸ್ ಭರ್ಜರಿ ಶತಕದ ನೆರವಿನಿಂದ ಕಿವೀಸ್ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 238 ರನ್ ಗಳಿಸಿದೆ. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ್ದ ವಿಂಡೀಸ್ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿದ್ದು, 9 ವಿಕೆಟ್‌ಗಳ ನಷ್ಟಕ್ಕೆ ಕೇವಲ 166 ರನ್ ಗಳಿಸಲಷ್ಟೇ ಶಕ್ತವಾಯಿತು.

2018ರಲ್ಲಿ ಕಾಲಿನ್ ಮುನ್ರೊ ವೆಸ್ಟ್‌ಇಂಡೀಸ್ ವಿರುದ್ಧವೇ ನ್ಯೂಝಿಲ್ಯಾಂಡ್‌ನ ಪರ ವೇಗದ ಶತಕ ದಾಖಲಿಸಿದ್ದರು. ಮುನ್ರೊ ಶತಕ ಪೂರೈಸಲು 47 ಎಸೆತಗಳನ್ನು ಎದುರಿಸಿದ್ದರು. ಫಿಲಿಪ್ಸ್ ಅವರು ಕೇವಲ 46 ಎಸೆತಗಳಲ್ಲಿ ಶತಕವನ್ನು ಸಿಡಿಸಿ ಗಮನ ಸೆಳೆದರು. 23ರ ವಯಸ್ಸಿನ ಫಿಲಿಪ್ಸ್ ಅವರು ಡಿವೊನ್ ಕಾನ್‌ವೇ ಅವರೊಂದಿಗೆ 3 ವಿಕೆಟ್‌ಗೆ 184 ರನ್ ಜೊತೆಯಾಟ ನಡೆಸಿದರು. ಡಿವೊನ್ 37 ಎಸೆತಗಳಲ್ಲಿ 65 ರನ್ ಗಳಿಸಿದರು.

ಕಿವೀಸ್ ಮೊದಲ ಟಿ-20ಯನ್ನು 5 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಮೂರನೇ ಹಾಗೂ ಕೊನೆಯ ಪಂದ್ಯ ಸೋಮವಾರ ನಡೆಯಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News