ಮಳೆಯಿಂದಾಗಿ ನ್ಯೂಝಿಲ್ಯಾಂಡ್ -ವಿಂಡೀಸ್ ಟ್ವೆಂಟಿ-20 ಪಂದ್ಯ ರದ್ದು

Update: 2020-11-30 18:12 GMT

ಮೌಂಟ್ ಮೌಂಗನುಯಿ, ನ.30: ಮಳೆಯಿಂದಾಗಿ ಸೋಮವಾರ ನ್ಯೂಝಿಲ್ಯಾಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಮತ್ತು ಅಂತಿಮ ಟ್ವೆಂಟಿ -20 ಅಂತರ್‌ರಾಷ್ಟ್ರೀಯ ಪಂದ್ಯ ರದ್ದಾಗಿದೆ.

ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ನ್ಯೂಝಿಲ್ಯಾಂಡ್ ತಂಡ ಸರಣಿಯನ್ನು 2-0 ಅಂತರದಲ್ಲಿ ಜಯಿಸಿದೆ.

ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್‌ತಂಡ 2.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 25 ರನ್ ಗಳಿಸುವ ಹೊತ್ತಿಗೆ ಮಳೆ ಕಾಣಿಸಿಕೊಂಡು ಆಟಗಾರರು ಕ್ರೀಡಾಂಗಣದಿಂದ ಹೊರ ನಡೆದರು. ಎರಡು ಗಂಟೆಗಳ ನಂತರ ಆಟವನ್ನು ಮತ್ತೆ ಆರಂಭಿಸಲು ಯಾವುದೇ ಅವಕಾಶ ಇಲ್ಲದಾಗ ಅಂತಿಮವಾಗಿ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡರು. ಕಳೆದ ರವಿವಾರ ನಡೆದ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನ್ಯೂಝಿಲ್ಯಾಂಡ್ 72 ರನ್‌ಗಳ ಜಯ ಗಳಿಸಿತ್ತು. ಮೊದಲ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಮೊದಲ ಪಂದ್ಯದಲ್ಲ್ಲಿ 21ಕ್ಕೆ ಐದು ವಿಕೆಟ್, ಎರಡು ಮತ್ತು ಮೂರನೇ ಪಂದ್ಯದಲ್ಲಿ ತಲಾ 1 ವಿಕೆಟ್ ಕಬಳಿಸಿದ್ದ ಲೂಕೆ ಫರ್ಗ್ಯುಸನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದರು. ಉಭಯ ತಂಡಗಳ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲನೆಯ ಪಂದ್ಯ ಗುರುವಾರ ಹ್ಯಾಮಿಲ್ಟನ್‌ನಲ್ಲಿ ಪ್ರಾರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News