ಇಂಗ್ಲೆಂಡ್ ಗೆ ಸರಣಿ ಜಯ; ಮಲಾನ್ ಅರ್ಧಶತಕ

Update: 2020-11-30 18:14 GMT

ಪಾರ್ಲ್, ನ.30: ಇಲ್ಲಿ ನಡೆದ ಎರಡನೇ ಟ್ವೆಂಟಿ -20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ತಂಡ ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸಿದ್ದು, ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.

ಬೊಲ್ಯಾಂಡ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 147 ರನ್ ಗಳಿಸಬೇಕಿದ್ದ ಇಂಗ್ಲೆಂಡ್ ತಂಡ ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ 6 ವಿಕೆಟ್ ನಷ್ಟದಲ್ಲಿ 147 ರನ್ ಗಳಿಸಿತು. 33 ಹರೆಯದ ಡೇವಿಡ್ ಮಲಾನ್ 40 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಇರುವ 55 ರನ್ ಗಳಿಸಿ ಇಂಗ್ಲೆಂಡ್‌ಗೆ ಗುರಿ ತಲುಪಲು ಸಹಾಯ ಮಾಡಿದರು. ನಾಯಕ ಇಯಾನ್ ಮೊರ್ಗನ್ ಔಟಾಗದೆ 26 ರನ್ ಮತ್ತು ವಿಕೆಟ್ ಕೀಪರ್ ಜೋಸ್ ಬಟ್ಲರ್ 22 ರನ್, ಜಾಸನ್ ರಾಯ್ 14 ರನ್, ಬೆನ್ ಸ್ಟೋಕ್ಸ್ 16 ರನ್ ಗಳಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 146 ರನ್ ಗಳಸಿತ್ತು.

ದಕ್ಷಿಣ ಆಫ್ರಿಕಾದ ನಾಯಕ ಕ್ವಿಂಟನ್ ಡಿ ಕಾಕ್ ಅವರು ತಂಡಕ್ಕೆ ಭರವಸೆಯ ಆರಂಭವನ್ನು ನೀಡಿದರು. ಅವರು 18 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಇರುವ 30 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ತವರಿನ ತಂಡವು ಇಂಗ್ಲಿಷ್ ಬೌಲರ್‌ಗಳ ದಾಳಿಗೆ ರನ್ ಗಳಿಸಲು ಪರದಾಡಿತು. ಅದರಲ್ಲೂ ವಿಶೇಷವಾಗಿ ಸ್ಪಿನ್ನರ್ ಆದಿಲ್ ರಶೀದ್ ಸತತ ಎಸೆತಗಳಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಅವರು ನಾಲ್ಕು ಓವರ್‌ಗಳಲ್ಲಿ 23ಕ್ಕೆ 2 ವಿಕೆಟ್ ಕಬಳಿಸಿದರು. ಜೋಫ್ರಾ ಆರ್ಚರ್ ಬಿಗಿಯಾದ ಬೌಲಿಂಗ್‌ನೊಂದಿಗೆ ಪವರ್‌ಪ್ಲೇನಲ್ಲಿ ಆಫ್ರಿಕಾದ ಬ್ಯಾಟ್ಸ್ ಮನ್‌ಗಳನ್ನು ಕಾಡಿದರು.

ರಾಸ್ಸಿ ವಾನ್ ಡೆರ್ ಡುಸೆನ್ ಮತ್ತು ಜಾರ್ಜ್ ಲಿಂಡೆ ಆರನೇ ವಿಕೆಟ್‌ಗೆ 44 ರನ್‌ಗಳ ಜೊತೆಯಾಟ ನೀಡಿದರು. ಲಿಂಡೆ 29 ರನ್ ಗಳಿಸಿ ಔಟಾದರು. ಡುಸೆನ್ ಔಟಾಗದೆ 25 ರನ್ ಗಳಿಸಿ ತಂಡಕ್ಕೆ ಸಾಧಾರಣ ಸವಾಲು ದಾಖಲಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News