2020ರಲ್ಲಿ ಏಕದಿನ ಶತಕ ಗಳಿಸದೇ ವರ್ಷ ಪೂರೈಸಿದ ಕೊಹ್ಲಿ

Update: 2020-12-02 15:47 GMT

ಕ್ಯಾನ್ ಬೆರಾ: ಭಾರತದ ನಾಯಕ ವಿರಾಟ್ ಕೊಹ್ಲಿ ಕಳೆದ ಕೆಲವು ವರ್ಷಗಳಿಂದ ಎಲ್ಲ ಮಾದರಿ ಕ್ರಿಕೆಟ್ ನಲ್ಲಿ ಓರ್ವ ಶ್ರೇಷ್ಠ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಕೋವಿಡ್-19 ಕಾರಣಕ್ಕೆ ಸುಮಾರು ಆರು ತಿಂಗಳು ಕ್ರೀಡಾ ಚಟುವಟಿಕೆ ಸ್ತಬ್ದವಾಗಿತ್ತು. ಇದೀಗ ಕೊಹ್ಲಿ ಕ್ರಿಕೆಟ್ ಕಾಲಿಟ್ಟಿರುವ 2008ರ ಬಳಿಕ ಮೊದಲ ಬಾರಿ ಏಕದಿನ ಕ್ರಿಕೆಟ್ ನಲ್ಲಿ ಶತಕ ಗಳಿಸದೇ ವರ್ಷವನ್ನು ಪೂರೈಸಿದ್ದಾರೆ. ಈ ವರ್ಷ ಕೊಹ್ಲಿಗೆ ಒಂದೇ ಒಂದು ಶತಕ ಗಳಿಸಲು ಸಾಧ್ಯವಾಗಿಲ್ಲ.

ಬುಧವಾರ ನಡೆದ ಆಸ್ಟ್ರೇಲಿಯ ವಿರುದ್ದದ 3ನೇ ಏಕದಿನ ಪಂದ್ಯದಲ್ಲಿ 63 ರನ್ ಗಳಿಸಿ ಔಟಾಗುವುದರೊಂದಿಗೆ ಕೊಹ್ಲಿ 2020ನೇ ವರ್ಷವನ್ನು ಶತಕವಿಲ್ಲದೆ ಅಂತ್ಯಗೊಳಿಸಿದರು. ಕೊಹ್ಲಿ ಈ ವರ್ಷ ಗಳಿಸಿರುವ ಗರಿಷ್ಠ ವೈಯಕ್ತಿಕ ಸ್ಕೋರ್ 89. ಈ ವರ್ಷ ಅವರು ಎರಡು ಬಾರಿ 89 ರನ್ ಗಳಿಸಿದ್ದಾರೆ. ಎರಡೂ ಬಾರಿಯೂ ಆಸ್ಟ್ರೇಲಿಯ ವಿರುದ್ಧವೇ ಈ ಸ್ಕೋರನ್ನು ಗಳಿಸಿದ್ದಾರೆ.

ಕೊರೋನ ವೈರಸ್ ಸಾಂಕ್ರಾಮಿಕ ರೋಗದ ಹಾವಳಿಯ ಕಾರಣಕ್ಕೆ ಕೊಹ್ಲಿ ಈ ವರ್ಷ ಕೇವಲ 9 ಏಕದಿನ ಪಂದ್ಯಗಳನ್ನು ಆಡಿದ್ದರು. ಪ್ರಸ್ತುತ ಪ್ರವಾಸಕ್ಕಿಂತ ಮೊದಲು ಭಾರತವು ಫೆಬ್ರವರಿಯಲ್ಲಿ ನ್ಯೂಝಿಲ್ಯಾಂಡ್ ಗೆ ಕ್ರಿಕೆಟ್ ಪ್ರವಾಸ ಕೈಗೊಂಡಿತ್ತು.

ವೇಗವಾಗಿ 12,000 ರನ್ ಪೂರೈಸಿರುವ ಕೊಹ್ಲಿಗೆ ಈ ವರ್ಷ ಏಕದಿನ ಪಂದ್ಯದಲ್ಲಿ ಶತಕ ಗಳಿಸಲು ಸಾಧ್ಯವಾಗದೇ ಇರುವುದಕ್ಕೆ ಖಂಡಿತವಾಗಿಯೂ ಬೇಸರವಾಗಿರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News