ಪಾಕಿಸ್ತಾನದಿಂದ ವಿಶ್ವಸಂಸ್ಥೆಯ ಒಪ್ಪಂದ ಉಲ್ಲಂಘನೆ

Update: 2020-12-03 15:55 GMT

  ನ್ಯೂಯಾರ್ಕ್, ಡಿ. 3: ಕಳೆದ ವರ್ಷ ವಿಶ್ವಸಂಸ್ಥೆ ಅಂಗೀಕರಿಸಿದ ಶಾಂತಿ ಸಂಸ್ಕೃತಿ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂದು ಭಾರತ ಬುಧವಾರ ಆರೋಪಿಸಿದೆ. ಸಿಖ್ಖರ ಪವಿತ್ರ ಆರಾಧನಾ ಸ್ಥಳವಾಗಿರುವ ಕರ್ತಾರ್‌ಪುರ ಸಾಹಿಬ್ ಗುರುದ್ವಾರದ ಆಡಳಿತವನ್ನು ಸಿಖ್ ಸಮುದಾಯದ ಸಂಸ್ಥೆಯಿಂದ ಸಿಖ್ಖೇತರ ಸಂಸ್ಥೆಯೊಂದಕ್ಕೆ ಪಾಕಿಸ್ತಾನವು ವರ್ಗಾಯಿಸಿದೆ ಎಂದು ಭಾರತ ಹೇಳಿದೆ.

ವಿಶ್ವಸಂಸ್ಥೆಯ ಮಹಾಸಭೆಯ 75ನೇ ಅಧಿವೇಶನದಲ್ಲಿ ಮಾತನಾಡಿದ, ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಥಮ ಕಾರ್ಯದರ್ಶಿ ಆಶಿಶ್ ಶರ್ಮ, ‘‘ಇದೇ ಅಧಿವೇಶನ ಕಳೆದ ವರ್ಷ ಅಂಗೀಕರಿಸಿದ ಶಾಂತಿ ಸಂಸ್ಕೃತಿ ಒಪ್ಪಂದವನ್ನು ಪಾಕಿಸ್ತಾನ ಈಗಾಗಲೇ ಉಲ್ಲಂಘಿಸಿದೆ’’ ಎಂದು ಹೇಳಿದರು.

‘‘ಕಳೆದ ತಿಂಗಳು ಪಾಕಿಸ್ತಾನವು ಸ್ವೇಚ್ಛಾಚಾರದಿಂದ ವರ್ತಿಸಿ, ಸಿಖ್ಖರ ಪವಿತ್ರ ಕ್ಷೇತ್ರ ಕರ್ತಾರ್‌ಪುರ ಸಾಹಿಬ್ ಗುರುದ್ವಾರದ ಆಡಳಿತವನ್ನು ಸಿಖ್ ಸಮುದಾಯಕ್ಕೆ ಸೇರಿದ ಸಂಸ್ಥೆಯಿಂದ ಸಿಖ್ಖೇತರ ಸಂಸ್ಥೆಯೊಂದಕ್ಕೆ ವರ್ಗಾಯಿಸಿತು’’ ಎಂದು ಅವರು ಹೇಳಿದರು.

ಕರ್ತಾರ್‌ಪುರದ ಗುರುದ್ವಾರ ಸಾಹಿಬ್‌ನ ಆಡಳಿತ ಮತ್ತು ನಿರ್ವಹಣೆಯನ್ನು ಪಾಕಿಸ್ತಾನವು ನವೆಂಬರ್ ತಿಂಗಳಲ್ಲಿ ಅಲ್ಪಸಂಖ್ಯಾತ ಸಿಖ್ ಸಮುದಾಯ ನಡೆಸುತ್ತಿರುವ ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿಯಿಂದ ಇವೇಕ್ವೀ ಟ್ರಸ್ಟ್ ಪ್ರಾಪರ್ಟಿ ಬೋರ್ಡ್‌ಗೆ ಹಸ್ತಾಂತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News