×
Ad

ಭಾರತದ ಡಿಆರ್‌ಎಸ್ ಮನವಿಗೆ ಅಂಪೈರ್ ನಕಾರ

Update: 2020-12-08 23:54 IST

ಸಿಡ್ನಿ, ಡಿ.8: ಮೂರನೇ ಟ್ವೆಂಟಿ-20 ಪಂದ್ಯದ ವಿವಾದಾತ್ಮಕ ಸನ್ನಿವೇಶವೊಂದರಲ್ಲಿ ಆಸ್ಟ್ರೇಲಿಯದ ಆರಂಭಿಕ ಆಟಗಾರ ಮ್ಯಾಥ್ಯೂ ವೇಡ್ ವಿರುದ್ಧ ಭಾರತವು ಮಾಡಿರುವ ಡಿಆರ್‌ಎಸ್ ಮನವಿಯನ್ನು ಮೂರನೇ ಅಂಪೈರ್ ತಿರಸ್ಕರಿಸಿದ್ದು, ನಿಯಮ ಮೀರಿ ಮಾಡಿರುವ ಅನೂರ್ಜಿತ ಹಾಗೂ ಅಕ್ರಮ ಮನವಿ ಇದಾಗಿದೆ ಎಂದು ಅಂಪೈರ್ ಹೇಳಿದ್ದಾರೆ.

ವೇಡ್ 35 ಎಸೆತಗಳಲ್ಲಿ 50 ರನ್ ಗಳಿಸಿದ್ದಾಗ ಟಿ.ನಟರಾಜನ್ ಅವರ ಎಸೆತವು ಅವರ ಪ್ಯಾಡ್‌ಗೆ ತಾಗಿತ್ತು. ಆದರೆ ಅವರಿಗೆ ಅಂಪೈರ್ ನಾಟೌಟ್ ತೀರ್ಪು ನೀಡಿದ್ದರು.

ನಾಯಕ ವಿರಾಟ್‌ಕೊಹ್ಲಿ, ಉಪ ನಾಯಕ ಹಾಗೂ ವಿಕೆಟ್‌ಕೀಪರ್ ಕೆಎಲ್ ರಾಹುಲ್‌ರನ್ನು ಸಂಪರ್ಕಿಸಿ ಡಿಆರ್‌ಎಸ್ ಮನವಿ ಮಾಡಬೇಕೇ, ಬೇಡವೇ ಎಂದು ಚರ್ಚಿಸಿದರು. ಭಾರತವು ಮನವಿ ಸಲ್ಲಿಸುವ ಅವಧಿ ಮುಗಿದರೂ ದಿಢೀರನೆ ಅಂಪೈರ್ ತೀರ್ಪು ಪ್ರಶ್ನಿಸಿ ಕೊಹ್ಲಿ ಮನವಿ ಮಾಡಿದರು.

ಸಿಡ್ನಿ ಕ್ರಿಕೆಟ್ ಸ್ಟೇಡಿಯಂನ ದೊಡ್ಡ ಪರದೆಯಲ್ಲಿ ರಿಪ್ಲೇ ಕಾಣಿಸಿಕೊಂಡ ಕಾರಣ ಮೂರನೇ ಅಂಪೈರ್ ಪಾಲ್ ವಿಲ್ಸನ್ ಅವರು ಕೊಹ್ಲಿ ಅವರ ಡಿಆರ್‌ಎಸ್ ಮನವಿಯನ್ನು ರದ್ದುಪಡಿಸಿದರು.

ದೊಡ್ಡ ಪರದೆಯಲ್ಲಿ ರಿಪ್ಲೇ ಬಂದಿರುವ ಕಾರಣ ಮತ್ತೊಮ್ಮೆ ಪುನರ್‌ಪರಿಶೀಲನೆ ನಡೆಸುವುದು ಅನೂರ್ಜಿತ ಹಾಗೂ ಅಕ್ರಮ ಎಂದು ವಿಲ್ಸನ್ ಹೇಳಿದರು.

ಆದರೆ ನಿಗದಿತ 15 ಸೆಕೆಂಡ್‌ಗಳ ಅವಧಿ ಮುಗಿದಿರುವುದು ಕೊಹ್ಲಿಯ ಮನವಿ ರದ್ದುಪಡಿಸಲು ನಿಜವಾದ ಕಾರಣವಾಗಿತ್ತು.

ಕೊಹ್ಲಿ ಕೆಲವೇ ಸೆಕೆಂಡ್‌ಗಳ ಮೊದಲು ಮನವಿ ಮಾಡಿದ್ದರೆ ವೇಡ್ ಎಲ್ಬಿಡಬ್ಲು ಬಲೆಗೆ ಬೀಳುತ್ತಿದ್ದರು. ಇದರ ಲಾಭ ಪಡೆದ ಅವರು 18 ಎಸೆತಗಳಲ್ಲಿ ಇನ್ನೂ 30 ರನ್ ಗಳಿಸಿ, ಒಟ್ಟು 80 ರನ್(53 ಎಸೆತ)ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News