ಗೂಗಲ್ ನಲ್ಲಿ ಈ ವರ್ಷ ಹೆಚ್ಚು ಹುಡುಕಾಡಿದ ವಿಷಯ ಯಾವುದು ಗೊತ್ತೇ?
ಹೊಸದಿಲ್ಲಿ: ಈ ವರ್ಷ(2020)ದೇಶದ ಜನತೆ ಗೂಗಲ್‌ನಲ್ಲಿ ಅತ್ಯಂತ ಹೆಚ್ಚು ಹುಡುಕಾಡಿದ ವಿಷಯ ಏನಿರಬಹುದು? ಕೊರೋನ ವೈರಸ್ ಕುರಿತಾಗಿರಬಹುದು ಎಂಬ ನಿಮ್ಮ ಊಹೆ ತಪ್ಪು.
ಟೆಕ್ ದೈತ್ಯ ಗೂಗಲ್ ಇಂಡಿಯಾವು 2020ರ ವರ್ಷದ ಹುಡುಕಾಟದ ಬಗ್ಗೆ ಮಾಹಿತಿ ನೀಡಿದ್ದು, ಅತ್ಯಂತ ಹೆಚ್ಚು ಹುಡುಕಾಟ ನಡೆಸಿದ ವಿಷಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಎಂಬುದು ಈಗ ಬಹಿರಂಗವಾಗಿದೆ. ಕಳೆದ ವರ್ಷ ‘ಐಸಿಸಿ ಕ್ರಿಕೆಟ್ ವಿಶ್ವಕಪ್’ ಟಾಪ್ ಟ್ರೆಂಡಿಂಗ್ ಆಗಿತ್ತು. ಕೊರೋನ ವೈರಸ್ ಹೆಚ್ಚು ಸರ್ಚ್ ಆಗಿರುವ ವಿಚಾರಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
ಕೋವಿಡ್ ಕಾಲದಲ್ಲಿ ಹಾಗೂ ಲಾಕ್‌ಡೌನ್ ಸಮಯದಲ್ಲಿ ಅತ್ಯಂತ ಹೆಚ್ಚು ಜನರು ಇಂಟರ್‌ನೆಟ್ ಮೊರೆ ಹೋಗಿದ್ದರು. ಮನೆಯಲ್ಲಿದ್ದುಕೊಂಡು ಸ್ಮಾರ್ಟ್‌ಫೋನ್‌ನ ಮೂಲಕ ಸಿನೆಮಾಗಳನ್ನು ವೀಕ್ಷಿಸಿದ್ದಾರೆ. ಇನ್ನು ಕೆಲವರು ಮನೆಯಲ್ಲಿದ್ದುಕೊಂಡು ಕಚೇರಿ ಕೆಲಸ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಇಂಟರ್‌ನೆಟ್ ಬಳಕೆ ಹಾಗೂ ಗೂಗಲ್ ಬಳಕೆ ಮಾಡಿದ್ದಾರೆ.
ಬೇಕೆನಿಸಿದ ವಸ್ತು, ವಿಚಾರಗಳನ್ನು ಗೂಗಲ್ ಸರ್ಚ್ ಇಂಜಿನ್ ಸಹಾಯ ಪಡೆದು ಹುಡುಕಾಡಿದ್ದಾರೆ. ಅದರಂತೆ ಇಂಡಿಯನ್ ಪ್ರೀಮಿಯರ್ ಲೀಗ್, ಕೊರೋನ ವೈರಸ್, ಅಮೆರಿಕಾ ಚುನಾವಣೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಬಿಹಾರ ಚುನಾವಣೆ ಫಲಿತಾಂಶ, ದಿಲ್ಲಿ ಚುನಾವಣೆ ಫಲಿತಾಂಶ, ರಾಮಮಂದಿರ ವಿಚಾರ, ನಿರ್ಭಯಾ ಪ್ರಕರಣ ಹೆಚ್ಚ್ಚು ಹುಡುಕಾಡಲಾಗಿದೆ.
ಜೋ ಬೈಡನ್, ಅರ್ನಬ್ ಗೋಸ್ವಾಮಿ ಅತ್ಯಂತ ಹೆಚ್ಚು ಹುಡುಕಾಟ ನಡೆದ ವ್ಯಕ್ತಿಗಳ ಪಟ್ಟಿಯಲ್ಲಿದ್ದಾರೆ. ಉತ್ತರ ಕೊರಿಯಾದ ಕಿಮ್‌ಜಾಂಗ್‌ವುನ್, ಖ್ಯಾತ ನಟ ಅಮಿತಾಭ್ ಬಚ್ಚನ್ ಕ್ರಮವಾಗಿ 4 ಹಾಗೂ 5ನೇ ಸ್ಥಾನದಲ್ಲಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ನಟನೆಯ ‘ದಿಲ್ ಬೆಚಾರ’ಸಿನೆಮಾ ಅತ್ಯಂತ ಹೆಚ್ಚು ಸರ್ಚ್ ಆಗಿದೆ.