ಪೀಲೆ ದಾಖಲೆ ಸರಿಗಟ್ಟಿದ ಲಿಯೊನೆಲ್ ಮೆಸ್ಸಿ
ಹೊಸದಿಲ್ಲಿ: ಲಾಲಿಗಾ ತಂಡ ವೆಲೆನ್ಸಿಯಾ ವಿರುದ್ಧ ಶನಿವಾರ ಗೋಲು ಗಳಿಸಿದ ಬಾರ್ಸಿಲೋನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಬ್ರೆಝಿಲ್ ದಂತಕತೆ ಪೀಲೆ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.
ಬಾರ್ಸಿಲೋನ ಫುಟ್ಬಾಲ್ ಕ್ಲಬ್ ಪರ ಗೋಲು ಗಳಿಸಿದ ಮೆಸ್ಸಿ ಒಂದೇ ಕ್ಲಬ್ ಪರವಾಗಿ ಗರಿಷ್ಠ ಗೋಲುಗಳನ್ನು ಗಳಿಸಿರುವ ಬ್ರೆಝಿಲ್ ದಂತಕತೆ ಪೀಲೆ ನಿರ್ಮಿಸಿರುವ ದಾಖಲೆಯೊಂದನ್ನು ಸರಿಗಟ್ಟಿದರು. ಮೊದಲಾರ್ಧದ ಕೆಲವೇ ನಿಮಿಷದ ಮೊದಲು ಮೆಸ್ಸಿ ಈ ಮಹತ್ವದ ಗೋಲು ಗಳಿಸಿದರು. ಅರ್ಜೆಂಟೀನದ ಫಾರ್ವರ್ಡ್ ಆಟಗಾರ ಮೆಸ್ಸಿ ಬಾರ್ಸಿಲೋನದ ಪರ 17 ವರ್ಷಗಳಲ್ಲಿ ಆಡಿರುವ 748 ಪಂದ್ಯಗಳ ಮೂಲಕ ಒಟ್ಟು 643 ಗೋಲುಗಳನ್ನು ಗಳಿಸಿದ್ದಾರೆ.
ಪೀಲೆ ಬ್ರೆಝಿಲ್‌ನ ತಂಡ ಸ್ಯಾಂಟೊಸ್ ಪರವಾಗಿ 19 ವರ್ಷಗಳ ಕಾಲ ಆಡಿದ್ದರು. 665 ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಒಟ್ಟು 643 ಗೋಲುಗಳನ್ನು ಗಳಿಸಿದ್ದರು. 1956ರಲ್ಲಿ ತನ್ನ 15ನೇ ವಯಸ್ಸಿನಲ್ಲೇ ಸ್ಯಾಂಟೊಸ್ ಪರ ಮೊದಲ ಪಂದ್ಯ ಆಡಿದ್ದ ಪೀಲೆ 1974ರಲ್ಲಿ ಸ್ಯಾಂಟೊಸ್ ಪರ ಕೊನೆಯ ಬಾರಿ ಆಡಿದ್ದರು. ಇದೀಗ ಮೆಸ್ಸಿ, ಪೀಲೆ ಅವರ ದಾಖಲೆ ಮುರಿಯುವ ಹಾದಿಯಲ್ಲಿದ್ದಾರೆ.